ಮಧ್ಯಪ್ರದೇಶದ ಭೋಪಾಲ್ನಲ್ಲಿ ಐದು ಮಹಿಳೆಯರನ್ನು ವಿವಾಹವಾಗಿದ್ದ ವ್ಯಕ್ತಿಯೊಬ್ಬ ಸ್ನೇಹಿತನ ತಂಗಿಯನ್ನು ಮದುವೆಯಾಗಲು ಬಯಸಿದಾಗ ನಿರಾಕರಿಸಿದ್ದಕ್ಕೆ ಆತನನ್ನೇ ಕೊಲೆ ಮಾಡಿದ್ದಾನೆ.
ಸ್ನೇಹಿತ ಸಂದೀಪ್ ಪ್ರಜಾಪತಿ ಕೊಲೆಯಾದವ. ಕೊಲೆ ಆರೋಪಿ ವಿಕಾಸ್ ಜೈಸ್ವಾಲ್ ಅಲಿಯಾಸ್ ಅವಕೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆಯ ನಂತರ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಹೈದರಾಬಾದ್‌ನಲ್ಲಿ ಬಂಧಿಸಿದ್ದಾರೆ.
ಕೊಲೆಯಾದವನ ತಂದೆ ಸೂರಜ್ ಪ್ರಜಾಪತಿ ತನ್ನ ಮಗ ಕಾಣೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದರು. ಅದೇ ದಿನ ಸಂದೀಪ್ ಸಹೋದರಿ ವಂದನಾ ಅವರಿಗೆ ಅವಕೇಶ್‌ನಿಂದ ಬೆದರಿಕೆ ಕರೆ ಬಂದಿದ್ದು, ಸಹೋದರನ ಬಿಡುಗಡೆಗೆ 1 ಲಕ್ಷ ರೂ. ನೀಡುವಂತೆ ಒತ್ತಾಯಿಸಿದ್ದ. ಈ ಮೂಲಕ ಪ್ರಕರಣದ ದಾರಿ ತಪ್ಪಿಸುವ ಪ್ರಯತ್ನ ನಡೆಸಿದ್ದ. ಈ ಸಂಭಾಷಣೆಯನ್ನು ರೆಕಾರ್ಡ್ ಮಾಡಿದ ಸಂದೀಪ್ ಕುಟುಂಬ ಪೊಲೀಸರಿಗೆ ಕಳುಹಿಸಿತ್ತು.
ಕೊಲೆ ಮಾಡಿದ ನಾಲ್ಕು ದಿನಗಳ ನಂತರ ಸೆಹೋರ್ ಜಿಲ್ಲೆಯ ದೇಲವಾಡಿ ಕಾಡಿನಲ್ಲಿ ಸಂದೀಪ್ ಶವ ಪತ್ತೆಯಾಗಿತ್ತು. ಆರೋಪಿ ಅವಕೇಶ್ ಹೈದರಾಬಾದ್‌ನಲ್ಲಿ ಪತ್ತೆಯಾಗಿದ್ದು, ಸುಳ್ಳು ಗುರುತಿನ ಮೂಲಕ ಟ್ರಕ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.