Thursday, September 04, 2025
Menu

ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಅನುಷ್ಠಾನ: ಮೂರು ದಿನಗಳಲ್ಲಿ ಅಂತಿಮ ತೀರ್ಮಾನವೆಂದ ಡಿಕೆ ಶಿವಕುಮಾರ್‌

ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3ರ ಅನುಷ್ಠಾನಕ್ಕೆ ಕೇಂದ್ರ ಜಲಶಕ್ತಿ ಸಚಿವರಲ್ಲಿ ಮನವಿ ಮಾಡಿದ್ದೇನೆ. ಅವರು ಸಹ ಈ ಬಗ್ಗೆ ಶೀಘ್ರದಲ್ಲೇ ಸಭೆ ನಿಗದಿ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ನಮ್ಮ ಸರ್ಕಾರ ಈ ಯೋಜನೆ ಸಾಕಾರಕ್ಕೆ ಬದ್ಧವಾಗಿದೆ. ಎರಡು- ಮೂರು ದಿನಗಳಲ್ಲಿ ಅಂತಿಮ ತೀರ್ಮಾನ ಮಾಡಲಾಗುತ್ತದೆ” ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದರು.

ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3ರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ನಡೆದ ಸಭೆಯ ನಂತರ ಜಲಸಂಪನ್ಮೂಲ ಸಚಿವರೂ ಆಗಿರುವ ಶಿವಕುಮಾರ್  ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಭೂಸ್ವಾಧೀನ, ಪುನರ್ವಸತಿ, ಪುನರ್ನಿರ್ಮಾಣ, ಭೂಪರಿಹಾರದ ಬಗ್ಗೆ ಪರಿಹಾರ ಕಂಡುಹಿಡಿಯಬೇಕು ಎಂದು ಮೂರ್ನಾಲ್ಕು ಸುತ್ತು ಚರ್ಚೆ ನಡೆಸಿದ್ದೇವೆ. ಈ ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರ ಅಧಿಕಾರವಧಿಯಲ್ಲಿ ಸಂಪುಟಸಭೆ ಹಾಗೂ ಉಪ ಸಮಿತಿ ಸಭೆಯಲ್ಲಿ ಪ್ರತಿ ಎಕರೆ ನೀರಾವರಿ ಜಮೀನಿಗೆ ರೂ. 24 ಲಕ್ಷ ರೂ., ಒಣ ಭೂಮಿಗೆ ರೂ. 20 ಲಕ್ಷ ಎಂದು ತೀರ್ಮಾನ ಮಾಡಿದ್ದರು. ಆದರೆ ಇದನ್ನು ಯಾವ ರೈತರೂ ಒಪ್ಪಲಿಲ್ಲ. ಬದಲಿಗೆ ಧರಣಿ ಕುಳಿತು ಹೋರಾಟ ಮಾಡುತ್ತಿದ್ದರು. ಹಿಂದೆ ಈ ಬಗ್ಗೆ ನಾವೇ ಬೆಳಗಾವಿಯಲ್ಲಿಯೂ ಸಭೆ ನಡೆಸಿದ್ದೆವು ಎಂದರು.

ಪರಿಹಾರ ಮೊತ್ತದ ವಿಚಾರವಾಗಿ ನ್ಯಾಯಲಯದಲ್ಲಿ ವ್ಯತಿರಿಕ್ತ ತೀರ್ಪು ಬಂದಿದೆ. ಹೆಚ್ಚು ಪರಿಹಾರ ಕೊಡಬೇಕು ಎಂದು ಹೇಳಿದೆ. ಇದನ್ನು ನೀಡಲು ಸಾಧ್ಯವಿಲ್ಲವೆಂದು ತೀರ್ಮಾನಿಸಲಾಗಿದೆ. ಸಚಿವ ಸಂಪುಟ ಸಭೆಯಲ್ಲಿಯೂ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಕೃಷ್ಣಾ ಮೇಲ್ದಂಡೆ ವಿಚಾರವಾಗಿ ರೈತರು ಸೇರಿದಂತೆ ಎಲ್ಲಾ ಪಕ್ಷಗಳ ಮುಖಂಡರು, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲಾಗುವುದು. ಪ್ರಸ್ತುತ ಸಭೆಯ ಬಗ್ಗೆ ಮುಖ್ಯಮಂತ್ರಿಗಳಿಗೂ ದೂರವಾಣಿ ಮೂಲಕ ಮಾಹಿತಿ ನೀಡಿದ್ದೇನೆ. ವಿಜಯಪುರ ಭಾಗದ ರೈತರು ನ್ಯಾಯಯುತ ಪರಿಹಾರ ನೀಡಿದರೆ ಒಪ್ಪುತ್ತೇವೆ ಎಂದು ಹೇಳಿದ್ದಾರೆ.

ಗುರುವಾರ (ನಾಳೆ) ನಡೆಯುವ ಕ್ಯಾಬಿನೆಟ್ ನಲ್ಲಿಯೂ ಚರ್ಚೆ ನಡೆಸಲಾಗುವುದು. ಕಳೆದ ವಾರ ಎಚ್.ಕೆ. ಪಾಟೀಲರು, ಎಂ.ಬಿ. ಪಾಟೀಲ್, ಶಿವಾನಂದ ಪಾಟೀಲ್ ಅವರು ಹಾಗೂ ನಾನು ಸಭೆ ನಡೆಸಿ ಚರ್ಚೆ ನಡೆಸಿದ್ದೆವು ಎಂದರು.

ಅರಮನೆ ಮೈದಾನದಲ್ಲಿ ಈದ್ ಮಿಲಾದ್ ಧಾರ್ಮಿಕ ಸಮಾರಂಭದ ಬಗ್ಗೆ ಕೇಳಿದಾಗ, ನನಗೆ ಈ ಬಗ್ಗೆ ತಿಳಿದಿಲ್ಲ. ಅನೇಕ ಧಾರ್ಮಿಕ ಸಭೆಗಳು ನಡೆಯುತ್ತವೆ. ದೇಶದ ಹಿತಕ್ಕಾಗಿ, ಧಾರ್ಮಿಕ ಹಿತಕ್ಕಾಗಿ ನಡೆಯುವ ಧಾರ್ಮಿಕ ಕಾರ್ಯಗಳಿಗೆ ನಾವು ತಲೆಹಾಕಲು ಹೋಗುವುದಿಲ್ಲ. ಈ ಹಿಂದೆಯೂ ಅಂತರರಾಷ್ಟ್ರೀಯ ಮಟ್ಟದ ಧರ್ಮ ಪ್ರಚಾರಕರು ಬೆಂಗಳೂರಿಗೆ ಬಂದು ಭಾಷಣ ಮಾಡಿದ ಉದಾಹರಣೆಗಳಿವೆ ಎಂದು ಉತ್ತರಿಸಿದರು.

Related Posts

Leave a Reply

Your email address will not be published. Required fields are marked *