ಅನೈತಿಕ ಸಂಬಂಧದಲ್ಲಿ ಉಂಟಾದ ಮನಸ್ತಾಪದ ಕಾರಣ ಅತ್ತೆಯ ಮಗನೇ ಮಹಿಳೆಯನ್ನು ಕೊಂದಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಅರೆನೂರು ಗ್ರಾಮದಲ್ಲಿ ನಡೆದಿದೆ.
ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಜನಾರ್ಧನನನ್ನು ಆಲ್ದೂರು ಪೊಲೀಸರು ಬಂಧಿದ್ದಾರೆ. ಕಳೆದೆರೆಡು ದಿನದ ಹಿಂದೆ ಅರೆನೂರು ಗ್ರಾಮದ ಸಂಧ್ಯಾ ಎಂಬ ಮಹಿಳೆಯ ಕೊಲೆಯಾಗಿದ್ದು, ಅತ್ತೆ ಮಗ ಜನಾರ್ದನ ಕೊಲೆಗೈದಾತ.
ಸಂಧ್ಯಾ ನಾಲ್ಕು ವರ್ಷಗಳ ಹಿಂದೆ ತನ್ನ ಗಂಡನನ್ನು ಬಿಟ್ಟು ಅರೆನೂರು ಗ್ರಾಮದಲ್ಲಿರುವ ತವರು ಮನೆಗೆ ಬಂದು ಪೋಷಕರೊಂದಿಗೆ ವಾಸವಾಗಿದ್ದರು. ಸಂಧ್ಯಾ ಮತ್ತು ಜನಾರ್ದನ ನಡುವೆ ಅನೈತಿಕ ಸಂಬಂಧ ಬೆಳೆದಿತ್ತು. ಇತ್ತೀಚೆಗೆ ಈ ಸಂಬಂಧದಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಇದೇ ಕೊಲೆಗೆ ಕಾರಣ ಎನ್ನಲಾಗಿದೆ.
ಹತ್ಯೆಗೂ ಮುನ್ನ ಸಂಧ್ಯಾ ಅರೆನೂರಿನ ಮನೆಯಿಂದ ಕಾಣೆಯಾಗಿದ್ದರು. ನಾಪತ್ತೆ ಬಗ್ಗೆ ಪೋಷಕರು ದೂರು ದಾಖಲಿಸಿದ್ದರು. ಆಕೆ ಮನೆಗೆ ಬಂದ ಮಾರನೇ ದಿನವೇ ಅಲ್ಲಿಗೆ ಬಂದ ಆರೋಪಿ ಆಕೆಯ ಮೇಲೆ ಚಾಕುವಿನಿಂದ ಮನಬಂದಂತೆ ಇರಿದು ಕತ್ತು ಕುಯ್ದು ಪರಾರಿಯಾಗಿದ್ದ. ತೀವ್ರ ರಕ್ತಸ್ರಾವದಿಂದಾಗಿ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದರು. ಆಲ್ದೂರು ಪೊಲೀಸರು ತಕ್ಷಣವೇ ಆರೋಪಿಯ ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ದಂಪತಿಯ ಜಗಳ: ಪತ್ನಿಯ ಕೊಂದ ವೃದ್ಧ ಆತ್ಮಹತ್ಯೆ
ಬೆಂಗಳೂರಿನಲ್ಲಿ ವೃದ್ಧ ದಂಪತಿ ನಡುವಿನ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯ ಕಂಡಿದೆ. ಸುಬ್ರಹ್ಮಣ್ಯಪುರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ವೆಂಕಟೇಶನ್ (65) ಪತ್ನಿ ಬೇಬಿ(60)ಯನ್ನು ಕೊಲೆ ಮಾಡಿ, ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೆಂಕಟೇಶನ್ ಬಿಎಂಟಿಸಿ ಡ್ರೈವರ್ ಆಗಿ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದಿದ್ದರು.
ಪತ್ನಿ ಬೇಬಿಗೆ ಸ್ಟ್ರೋಕ್ ಹೊಡೆದು ಹಾಸಿಗೆ ಹಿಡಿದಿದ್ದರು ಎನ್ನಲಾಗಿದೆ. ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರು ಹೊರಗೆ ಹೋದಾಗ ಸಣ್ಣಪುಟ್ಟ ವಿಚಾರಗಳಿಗೆ ಪತಿ ಪತ್ನಿ ಜಗಳವಾಡುತ್ತಿದ್ದರು. ಹೀಗೆ ನಡೆದ ಜಗಳ ವಿಕೋಪಕ್ಕೆ ತಿರುಗಿದೆ. ಇದರಿಂದ ಕುಪಿತರಾದ ವೆಂಕಟೇಶನ್ ಬಟ್ಟೆ ಒಣಗಲು ಹಾಕುವ ಹಗ್ಗದಿಂದ ಪತ್ನಿಯ ಕತ್ತು ಬಿಗಿದು ಕೊಲೆ ಮಾಡಿ, ಅದೇ ಹಗ್ಗದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಬ್ರಹ್ಮಣ್ಯಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


