ಮೈಸೂರಿನ ಸಾಲಿಗ್ರಾಮ ತಾಲೂಕು ಬೇರ್ಯ ಗ್ರಾಮದಲ್ಲಿ ಜಿಲೆಟಿನ್ ಕಡ್ಡಿಯನ್ನು ಮಹಿಳೆಯ ಬಾಯಿಗೆ ಹಾಕಿ ಸಿಡಿಸಿ ಬರ್ಬರ ಹತ್ಯೆ ಮಾಡಿರುವ ಪ್ರಕರಣ ಬಯಲಾಗಿದೆ. ಮಹಿಳೆ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ ವ್ಯಕ್ತಿ ಹತ್ಯೆ ಮಾಡಿದ ಬಳಿಕ ಮೊಬೈಲ್ ಬ್ಲಾಸ್ಟ್ ಆಗಿ ಮೃತಪಟ್ಟಿದ್ದಾಗಿ ಕಥೆ ಕಟ್ಟಿದ್ದ.
ಹುಣಸೂರು ತಾಲೂಕಿನ ಗೆರಸನಹಳ್ಳಿ ಗ್ರಾಮದ ರಕ್ಷಿತ(20) ಕೊಲೆಯಾದ ಮಹಿಳೆ. ಪಿರಿಯಾಪಟ್ಟಣದ ಬಿಳಿಕೆರೆ ಗ್ರಾಮದ ಸಿದ್ದರಾಜು ಎಂಬಾತ ಕೊಲೆ ಮಾಡಿದಾತ. ಕೇರಳ ಮೂಲದ ವ್ಯಕ್ತಿಯನ್ನು ಮದುವೆಯಾಗಿದ್ದ ರಕ್ಷಿತಾ ಎಂಬಾಕೆ ಸಿದ್ದರಾಜು ಎಂಬಾತನ ಜೊತೆ ಸಂಬಂಧ ಇಟ್ಟುಕೊಂಡಿದ್ದರು. ಕಪ್ಪಡಿ ಕ್ಷೇತ್ರಕ್ಕೆ ಹೋಗೋಣ ಎಂದು ಆಕೆಯನ್ನು ಕರೆದುಕೊಂಡು ಹೋಗಿದ್ದ ಸಿದ್ದರಾಜು, ಲಾಡ್ಜ್ ನಲ್ಲಿ ಕೊಲೆ ಮಾಡಿದ ಬಳಿಕ ಮೊಬೈಲ್ ಬ್ಲಾಸ್ಟ್ ಅಂತ ಕೂಗಾಡಿದ್ದ. ಸ್ಥಳದಲ್ಲಿ ಯಾವುದೇ ಮೊಬೈಲ್ ಇಲ್ಲದ ಕಾರಣ ಸಿಬ್ಬಂದಿಗೆ ಅನುಮಾನ ಬಂದಿತ್ತು, ಬ್ಲಾಸ್ಟ್ ಆದ ಮೊಬೈಲ್ ಎಲ್ಲಿ ಎಂದು ಕೇಳಿದಾಗ ಹೊರಗೆ ಬಿಸಾಡಿದ್ದಾಗಿ ಸುಳ್ಳು ಹೇಳಿ ಪರಾರಿಯಾಗಲು ಯತ್ನಿಸಿದ್ದ.
ಸಿಬ್ಬಂದಿ ಹುಡುಕಾಟ ನಡೆಸಿದರೂ ಮೊಬೈಲ್ ಸಿಗದಿದ್ದಾಗ ಅನುಮಾನ ಬಂದು ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಪೋನ್ ಮಾಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ವಿಚಾರಿಸಿದಾಗ ನಿಜವಾದ ವಿಷಯ ಹೊರ ಬಂದಿದೆ. ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.