ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಶಂಕೆಯಿಂದ ಅನ್ಣನೊಬ್ಬ ಸ್ವಂತ ತಮ್ಮನನ್ನೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಸಿಂಧನೂರು ತಾಲೂಕಿನ ವೆಂಕಟೇಶ್ವರ್ ಕ್ಯಾಂಪ್‌ನಲ್ಲಿ ನಡೆದಿದೆ.
ರಾಜು ಅಲಿಯಾಸ್ ಎಮ್ಮಿರಾಜು (32) ಕೊಲೆಯಾದವ. ಸುರೇಶ್ ಅಲಿಯಾಸ್ ಸೂರಿಬಾಬು(38) ಕೊಲೆಗಾರ ಅಣ್ಣ. ಹೈದ್ರಾಬಾದ್‌ನಲ್ಲಿ ಪತ್ನಿಯನ್ನು ಬಿಟ್ಟು ಊರಿಗೆ ಬಂದಿದ್ದ ರಾಜು. ಟ್ರ್ಯಾಕ್ಟರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಅಣ್ಣ ಸೂರಿಬಾಬು ಗ್ರಾಮದಲ್ಲಿ ಇಸ್ತ್ರಿ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ.
ಭಾನುವಾರ ಅಣ್ಣ-ತಮ್ಮ ಇಬ್ಬರೂ ಒಟ್ಟಿಗೆ ಸೇರಿ ಕಂಠಪೂರ್ತಿ ಕುಡಿದಿದ್ದಾರೆ. ಕುಡಿದ ಮತ್ತಿನಲ್ಲಿ ಅಣ್ಣನ ಪತ್ನಿ ಬಗ್ಗೆ ತಮ್ಮ ಮಾತನಾಡಿದ್ದಾನೆ, ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ತಮ್ಮನ ಮೇಲೆ ಅಣ್ಣ ಸೂರಿಬಾಬುಗೆ ಅನುಮಾನ ಬಂದಿದೆ.
ಕೋಪದಲ್ಲಿ ಸೂರಿಬಾಬು ಕೊಡಲಿ ತೆಗೆದು ತಮ್ಮನ ತಲೆಗೆ ಹೊಡೆದಿದ್ದು, ತೀವ್ರ ರಕ್ತಸ್ರಾವವಾಗಿ ತಮ್ಮ ಸ್ಥಳದಲ್ಲಿ ಕುಸಿದುಬಿದ್ದು ಅಸು ನೀಗಿದ್ದಾನೆ. ಅಕ್ಕಪಕ್ಕದವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಸಿಂಧನೂರು ಗ್ರಾಮೀಣ ಠಾಣೆಯ ಪೊಲೀಸರು ಆರೋಪಿ ಸೂರಿಬಾಬುವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಹಳ್ಳಿಗಳು, ನಗರಗಳು, ಯುವಕರು, ವೃದ್ಧರು, ಮಕ್ಕಳು ಎನ್ನದೆ ಅನೈತಿಕ ಸಂಬಂಧವೆಂಬ ಪ್ರವೃತ್ತಿ ಎಲ್ಲೆಡೆ ಸುದ್ದಿಯಾಗುತ್ತಿದ್ದು, ಆ ಸಂಬಂಧ ಕೊಲೆಗಳು ನಡೆಯುವುದು ಸಾಮಾನ್ಯ ಎಂಬಂತೆ ಕೇಳಿ ಬರುತ್ತಿವೆ. ಕುಟುಂಬವೆಂಬ ಚೌಕಟ್ಟಿಗೆ ಅನೈತಿಕ ಸಂಬಂಧವು ಬೆದರಿಕೆಯಾಗಿ ಪರಿಣಮಿಸುತ್ತಿದೆ


