Menu

ನಾನು ಯುದ್ಧ ನಿಲ್ಲಿಸೋದರಲ್ಲಿ ನಿಪುಣ: ಮತ್ತೆ ತನ್ನ ಬೆನ್ನು ತಾನೇ ತಟ್ಟಿಕೊಂಡ ಟ್ರಂಪ್‌

ನಾನು ಯುದ್ಧ ನಿಲ್ಲಿಸುವುದರಲ್ಲಿ ನಿಪುಣ, ಭಾರತ ಮತ್ತು ಪಾಕ್‌ ಯುದ್ಧ ಸೇರಿದಂತೆ ವಿಶ್ವದ ಹಲವು ಸಂಘರ್ಷಗಳನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆಂದು ಅಮೆರಿಕ ಅಧ್ಯಕ್ಷ
ಡೊನಾಲ್ಡ್‌ ಟ್ರಂಪ್‌ ಮತ್ತೊಮ್ಮೆ ತನ್ನ ಬೆನ್ನು ತಾನೇ ತಟ್ಟಿಕೊಂಡಿದ್ದಾರೆ. ಇದನ್ನೆಲ್ಲ ನೊಬೆಲ್‌ ಶಾಂತಿ ಪ್ರಶಸ್ತಿಗಾಗಿ ಮಾಡಿಲ್ಲ ಎಂದೂ ಹೇಳಿದ್ದಾರೆ.

ಭಾನುವಾರ ರಾತ್ರಿ ಗಾಜಾಕ್ಕೆ ತೆರಳುವ ಮುನ್ನ ಟ್ರಂಪ್‌ ಈ ಹೇಳಿಕೆ ನೀಡಿದ್ದಾರೆ. ಇಸ್ರೇಲ್‌-ಗಾಜಾ ಕದನ ವಿರಾಮ ನಾನು ಪರಿಹರಿಸಿದ 8 ಯುದ್ಧ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಸಂಘರ್ಷ ವನ್ನೂ ಪರಿಹರಿಸುತ್ತೇನೆ ಎಂದಿದ್ದಾರೆ.

ಭಾರತ-ಪಾಕ್‌ ಸಂಘರ್ಷ ಉಲ್ಲೇಖಿಸಿ ಮಾತನಾಡಿದ ಟ್ರಂಪ್‌, ಭಾರತ ಮತ್ತು ಪಾಕಿಸ್ತಾನದ ಬಗ್ಗೆ ಯೋಚಿಸಿ. ಕೆವುಯುದ್ಧಗಳು 31, 32, 37 ವರ್ಷ ನಡೆದವು. ಲಕ್ಷಾಂತರ ಜನರು
ಮೃತಪಟ್ಟಿದ್ದಾರೆ. ನಾನು ಒಂದು ದಿನದ ಒಳಗಾಗಿ ಯುದ್ಧ ಪರಿಹರಿಸಿದೆ. ವ್ಯಾಪಾರ ಮತ್ತು ಸುಂಕದಂತಹ ಆರ್ಥಿಕ ಕ್ರಮಗಳ ಮೂಲಕ ಸಂಘರ್ಷ ಬಗೆಹರಿಸಿದ್ದೇನೆ ಎಂದು ತಿಳಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ತಡೆಯಲು ನಿಮ್ಮ ಬಳಿ ಪರಮಾಣು ಶಸ್ತ್ರಾಸ್ತ್ರಗಳಿವೆ ಅಂತ ನಾನು ಅವರಿಗೆ ಹೇಳಿದ್ದೆ. ನೀವಿಬ್ಬರೂ ಯುದ್ಧಕ್ಕೆ ಹೋದರೆ ನಿಮ್ಮ ಮೇಲೆ 100%, 150% ಮತ್ತು 200% ಸುಂಕ ವಿಧಿಸುತ್ತೇನೆ ಅಂತ ಎಚ್ಚರಿಕೆ ಕೊಟ್ಟಿದ್ದೆ. ಸುಂಕದ ಎಚ್ಚರಿಕೆ ನೀಡಿದ 24 ಗಂಟೆಗಳಲ್ಲಿ ಯುದ್ಧ ನಿಲ್ಲಿಸಿದೆ. ಇಲ್ಲದಿದ್ದರೆ ಈ ಯುದ್ಧ ನಿಲ್ಲುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಯುದ್ಧಗಳನ್ನು ನಿಲ್ಲಿಸುವುದು ನನಗೆ ಗೌರವ. ಜೀವಗಳನ್ನು ಉಳಿಸುವ ಉದ್ದೇಶದಿಂದ ನಾನು ಈ ಕೆಲಸಗಳನ್ನು ಮಾಡಿದ್ದೇನೆ ಎಂದು ಟ್ರಂಪ್‌ ಹೇಳಿದ್ದಾರೆ.

ಗಾಜಾದಲ್ಲಿ ಯುದ್ಧ ಅಂತ್ಯಗೊಂಡಿದ್ದು ಮಧ್ಯಪ್ರಾಚ್ಯದಲ್ಲಿ ಈಗ ಶಾಂತಿ ನೆಲೆಸಿದೆ ಎಂದು ಟ್ರಂಪ್‌ ಘೋಷಿಸಿದ್ದಾರೆ. ಹಮಾಸ್ ಒತ್ತೆಯಾಳುಗಳ ಬಿಡುಗಡೆಗೂ ಮೊದಲು ಟ್ರಂಪ್‌ ಪಶ್ಚಿಮ ಏಷ್ಯಾಕ್ಕೆ ತೆರಳಿದ್ದಾರೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ಮುಗಿದಿದೆ ಅನ್ನೊ ವಿಶ್ವಾಸ ನಿಮಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಹೌದು ಯುದ್ಧ ಮುಗಿದಿದೆ ಎಂದು ಉತ್ತರಿಸಿದ್ದಾರೆ. ಇದೊಂದು ವಿಶೇಷ ಕಾರ್ಯಕ್ರಮ, ಒಂದು ಕಡೆ ಸಂತೋಷ ಮತ್ತೊಂದು ಕಡೆ ದುಃಖ. ಯುದ್ಧ ನಿಲ್ಲಿಸುವ ಭಾಗವಾಗಿರುವುದು ನಿಜಕ್ಕೂ ನನಗೆ ಗೌರವ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

Related Posts

Leave a Reply

Your email address will not be published. Required fields are marked *