ಬೆಂಗಳೂರಿನ ಯಶವಂತಪುರದ ಮುತ್ಯಾಲಮ್ಮ ನಗರದಲ್ಲಿ ವಿವಾಹಿತ ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಕಾರಣಕ್ಕೆ ಮಹಿಳೆಯ ಸಂಬಂಧಿಕರು ಯುವಕನನ್ನು ಥಳಿಸಿ ಕೊಲೆ ಮಾಡಿದ್ದಾರೆ.
ನರಸಿಂಹರಾಜು (32) ಕೊಲೆಯಾದ ಯುವಕ, ಯುವಕನೊಬ್ಬನನ್ನು ಭೀಕರವಾಗಿ ಥಳಿಸಿ ಕೊಲೆ ಮಾಡಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶನಿವಾರ ಮಹಿಳೆ ನರಸಿಂಹರಾಜು ಮನೆಗೆ ಬಂದಿದ್ದಳು. ಅದು ಆಕೆಯ ಸಂಬಂಧಿಕರಿಗೆ ಗೊತ್ತಾಗಿತ್ತು. ತಕ್ಷಣವೇ ನರಸಿಂಹರಾಜು ಮನೆಗೆ ಬಂದ ನಾಲ್ಕೈದು ಮಂದಿ ಆತನನ್ನು ಹೊರಗೆ ಎಳೆದುಕೊಂಡು ಹೋಗಿ ರಸ್ತೆಯುದ್ದಕ್ಕೂ ಹಲ್ಲೆ ನಡೆಸಿದ್ದಾರೆ. ತಡೆಯಲು ಬಂದ ನರಸಿಂಹರಾಜು ತಾಯಿಯ ಮೇಲೂ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಹಲ್ಲೆಯಿಂದ ತೀವ್ರ ರಕ್ತಸ್ರಾವಕ್ಕೆ ಒಳಗಾಗಿ ಅಸ್ವಸ್ಥನಾದ ನರಸಿಂಹರಾಜುವನ್ನು ತಕ್ಷಣವೇ ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ನರಸಿಂಹರಾಜು ಸಾವಿಗೆ ಮಹಿಳೆ ಹಾಗೂ ಆಕೆಯ ಕುಟುಂಬಸ್ಥರು ಕಾರಣ ಎಂದು ಆತನ ಕುಟುಂಬ ಆರೋಪಿಸಿದೆ. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದರೂ ಆರೋಪಿಗಳನ್ನು ಇನ್ನೂ ಬಂಧಿಸಲಾಗಿಲ್ಲ ಎಂದು ನರಸಿಂಹರಾಜು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಮರಣೋತ್ತರ ಪರೀಕ್ಷೆ ವರದಿಆಧರಿಸಿ ಆರೋಪಿಗಳ ವಿರುದ್ಧ ಮುಂದಿನ ಕ್ರಮ ಕೈಗೊಳ್ಳುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.


