ಮಂಡ್ಯದ ಮರಳಗಾಲ ಬಳಿ ಅರ್ಚಕರೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಪ್ರಕರಣದ ತನಿಖೆ ನಡೆಸಿರುವ ಪೊಲೀಸರು ಇದು ಅಕ್ರಮ ಸಂಬಂಧದ ಹಿನ್ನೆಲೆ ನಡೆದ ಕೊಲೆ ಎಂಬ ವಿಚಾರವನ್ನು ಬಯಲಿಗೆಳೆದಿದ್ದಾರೆ.
ತನ್ನ ಅಕ್ರಮ ಸಂಬಂಧಕ್ಕೆ ಗಂಡ ಅಡ್ಡಿಯಾಗಬಾರದೆಂದು ಪತ್ನಿಯು ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿಸಿದ್ದಾಳೆ. ಶಾಲಿನಿ ಎಂಬಾಕೆ ತನ್ನ ಪತಿ , ಅರ್ಚಕನಾಗಿ ಕೆಲಸ ಮಾಡುತ್ತಿದ್ದ ಸಿದ್ದಲಿಂಗಪ್ಪ ಎಂಬಾತನನ್ನು ಪ್ರಿಯಕರ ಹರೀಶ್ ಜೊತೆ ಸೇರಿ ಕೊಲೆ ಮಾಡಿದ್ದಾಳೆ. ಈಕೆಗೆ ಇಬ್ಬರು ಮಕ್ಕಳಿದ್ದಾರೆ ಎನ್ನಲಾಗಿದೆ.
ಶಾಲಿನಿ ಹಾಗೂ ಅದೇ ಗ್ರಾಮದ ಹರೀಶ್ ಅಕ್ರಮ ಸಂಬಂಧ ಹೊಂದಿದ್ದರು. ಒಂದೂವರೆ ವರ್ಷದ ಹಿಂದೆ ಸಿದ್ದಲಿಂಗಪ್ಪನ ಕೈಗೆ ಇಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಶಾಲಿನಿಗೆ ಹಲವು ಬಾರಿ ಬುದ್ಧಿಹೇಳಿದರೂ ಪ್ರಯೋಜನವಾಗಿರಲಿಲ್ಲ. ಗಂಡನ ಕಿರಿಕಿರಯೇ ಬೇಡವೆಂದು ಆತನನ್ನು ಮುಗಿಸಲು ಶಾಲಿನಿ ಸಂಚು ರೂಪಿಸಿದ್ದಳು. ಪೂಜೆಗೆಂದು ಪತಿ ಮರಳಗಾಲಕ್ಕೆ ತೆರಳಿದ್ದಾಗ ಶಾಲಿನಿಪ್ರಿಯಕರನಿಗೆ ಮೆಸೇಜ್ ಮಾಡಿ ತಿಳಿಸಿದ್ದಳು. ನಾಲೆ ಏರಿ ಬೈಕ್ನಲ್ಲಿ ಬರ್ತಿದ್ದ ಸಿದ್ದಲಿಂಗಪ್ಪನನ್ನು ಹರೀಶ್ ಮತ್ತು ಇಬ್ಬರು ಸ್ನೇಹಿತರು ಅಡ್ಡಗಟ್ಟಿ ದೊಣ್ಣೆಯಿಂದ ಹಲ್ಲೆ ಮಾಡಿ, ಹತ್ಯೆಗೈದು ಬಳಿಕ ಮೃತದೇಹವನ್ನು ನಾಲೆಗೆ ಬಿಸಾಕಿ ಅಪಘಾತವೆಂದು ಬಿಂಬಿಸಿದ್ದರು.
ಸಿದ್ದಲಿಂಗಪ್ಪ ಮನೆಗೆ ವಾಪಸ್ ಬಾರದಿದ್ದಾಗ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ನಾಲೆ ದಡದಲ್ಲಿ ಚಪ್ಪಲಿ ಹಾಗೂ ಬಟ್ಟೆ ಸಿಕ್ಕಿತ್ತು. ನಂತರ ನಾಲೆಯಲ್ಲಿ ಮೃತದೇಹ ಹಾಗೂ ಬೈಕ್ ಸಿಕ್ಕಿದೆ. ಪೊಲೀಸರು ಪರಿಶೀಲನೆ ನಡೆಸಿದಾಗ, ಚಪ್ಪಲಿ ಸಿಕ್ಕ ಸ್ಥಳದಲ್ಲಿ ರಕ್ತದ ಕಲೆ ಪತ್ತೆಯಾಗಿತ್ತು. ಅನುಮಾನಗೊಂಡ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದು ದೃಢಪಟ್ಟಿದೆ.


