ಯಲಹಂಕ ನ್ಯೂಟೌನ್‌ನ ಕಿಚನ್ ಫ್ಯಾಮಿಲಿ ರೆಸ್ಟೋರೆಂಟ್ ಬಿಲ್ಡಿಂಗ್‌ನಲ್ಲಿರುವ ಲಾಡ್ಜ್‌ನಲ್ಲಿ ಗುರುವಾರ ಮೂರು ಮಕ್ಕಳ ತಾಯಿ ಕಾವೇರಿ ಮತ್ತು ರಮೇಶ್ ಬೆಂಕಿಗೆ ಆಹುತಿಯಾಗಿರುವ ಪ್ರಕರಣಕ್ಕೆ ಅಕ್ರಮ ಸಂಬಂಧ ಕಾರಣ ಎಂಬ ಅಂಶ ಪೊಲೀಸ್ ವಿಚಾರಣೆಯಲ್ಲಿ ಬಯಲಾಗಿದೆ.
ಘಟನೆಯಲ್ಲಿ ಮೃತಪಟ್ಟವರನ್ನು ಹುನಗುಂದ ಮೂಲದ ಕಾವೇರಿ ಬಡಿಗೇರ್ ಮತ್ತು ಗದಗ ಮೂಲದ ರಮೇಶ್ ಎಂದು ಗುರುತಿಸಲಾಗಿದೆ. ಕಾವೇರಿ ಬಡಿಗೇರ್‌ಗೆ ಮದುವೆಯಾಗಿದ್ದು ಮೂವರು ಮಕ್ಕಳಿದ್ದರು. ರಮೇಶ್ ಜೊತೆಗೆ ಆಕೆ ಅಕ್ರಮ ಸಂಬಂಧವನ್ನು ಹೊಂದಿದ್ದರು ಎಂದಬುದು ಬಯಲಾಗಿದೆ.
ರಮೇಶ್ ಕಾವೇರಿಗೆ ಮದುವೆಯಾಗುವಂತೆ ಪೀಡಿಸುತ್ತಿದ್ದ ಎಂದು ಹೇಳಲಾಗಿದೆ. ಈ ವಿಚಾರದಲ್ಲಿ ರಮೇಶ್ ಬೆದರಿಕೆ ಹಾಕುತ್ತಿದ್ದು, ಮದುವೆಯಾಗದಿದ್ದರೆ ತಾನು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿದ್ದ. ಭಯಗೊಂಡಿದ್ದ ಕಾವೇರಿ ಲಾಡ್ಜ್‌ನ ವಾಶ್‌ರೂಂಗೆ ಓಡಿಹೋಗಿ ಬಾಗಿಲು ಲಾಕ್ ಮಾಡಿಕೊಂಡು ಸಂಬಂಧಿಕರಿಗೆ ಕರೆ ಮಾಡಿದ್ದಾಳೆ.
ಈ ಸಂದರ್ಭದಲ್ಲಿ ರಮೇಶ್ ತನ್ನ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಲಾಡ್ಜ್‌ನಲ್ಲಿ ಭೀಕರ ಬೆಂಕಿ ಆವರಿಸಿ ರಮೇಶ್ ಬೆಂಕಿಗೆ ಆಹುತಿಯಾಗಿದ್ದರೆ, ವಾಶ್‌ರೂಂನಲ್ಲಿ ಬಾಗಿಲು ಲಾಕ್ ಮಾಡಿಕೊಂಡಿದ್ದ ಕಾವೇರಿ, ಬೆಂಕಿಯಿಂದ ಉಂಟಾದ ದಟ್ಟ ಹೊಗೆಯಿಂದ ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಘಟನೆ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿಗಾಗಿ ತನಿಖೆಯನ್ನು ಮುಂದುವರಿಸಿದ್ದಾರೆ. ಗುರುವಾರ ಮಧ್ಯಾಹ್ನ 3 ಗಂಟೆ ರಮೇಶ್ ಹೊರಗಿನಿಂದ ಪೆಟ್ರೋಲ್ ತೆಗೆದುಕೊಂಡು ಬಂದಿದ್ದು, ರೂಮ್ ಒಳಗೆ ಇಬ್ಬರ ನಡುವೆ ಗಲಾಟೆ ಆಗಿದೆ. ಈ ವೇಳೆ ರಮೇಶ್ ಪೆಟ್ರೋಲ್ ಸುರಿದುಕೊಂಡು ಯುವತಿಗೂ ಸುರಿಯಲು ಮುಂದಾಗಿರುವುದಾಗಿ ಹೇಳಲಾಗಿದೆ.