ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಗುಮ್ಮಲಪಲ್ಲಿ ಗ್ರಾಮದಲ್ಲಿ ಸೊಸೆ ಹಾಗೂ ಆಕೆಯ ಪ್ರಿಯಕರ ಸೇರಿ ಅತ್ತೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಸೊಸೆ ಹಾಗೂ ಪ್ರಿಯಕರ ಶಶಿಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೊಳಗಾದ ಅತ್ತೆ ರಮಣಮ್ಮರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ತುಮ್ಮಲಪಲ್ಲಿ ಗ್ರಾಮದ ಮಂಜುನಾಥ್ ರೆಡ್ಡಿಯನ್ನು ಆಂಧ್ರಪ್ರದೇಶ ಮೂಲದ ಮಹಿಳೆ ಏಳು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದಳು. ಬಳಿಕ ಆಕೆ ಶಶಿಕುಮಾರ್‌ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು.
ಈ ವಿಚಾರ ಮಂಜುನಾಥ ರೆಡ್ಡಿಯ ತಾಯಿಗೆ ಗೊತ್ತಾಗಿತ್ತು. ಇದರಿಂದ ಸಿಟ್ಟಿಗೆದ್ದ ಸೊಸೆ ಹಾಗೂ ಆಕೆಯ ಪ್ರಿಯಕರ ಸೇರಿ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ರಾಯಲ್ಪಾಡು ಪೊಲೀಸರು ಸೊಸೆ ಹಾಗೂ ಶಶಿಕುಮಾರ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಮಾನಸಿಕ ಅಸ್ವಸ್ಥ ಮಗನೊಂದಿಗೆ ಕಟ್ಟಡದಿಂದ ಜಿಗಿದು ಮಹಿಳೆ ಆತ್ಮಹತ್ಯೆ
ಲಕ್ನೋದಲ್ಲಿ ಮಗನ ಮಾನಸಿಕ ಅಸ್ವಸ್ಥತೆಯಿಂದ ನೊಂದಿದ್ದ ಮಹಿಳೆಯೊಬ್ಬರು ಆತನೊಂದಿಗೆ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದ್ದಕ್ಕಿದ್ದಂತೆ ಬಿಲ್ಡಿಂಗ್‌ನಿಂದ ಮಹಿಳೆಯ ಚೀರಾಟ ಕೇಳಿಬಂದಾಗ ಸ್ಥಳೀಯರು ಕಿಟಕಿ, ಬಾಲ್ಕನಿಯಲ್ಲಿ ನಿಂತು ನೋಡುತ್ತಿರುವಾಗ ಕೆಲವೇ ಸೆಕೆಂಡುಗಳಲ್ಲಿ ತಾಯಿ ಮಗು ಇಬ್ಬರ ದೇಹ ನೆಲಕ್ಕೆ ಅಪ್ಪಳಿಸಿ ಪ್ರಾಣ ಹೋಗಿದೆ. ಸಾಕ್ಷಿ ಚಾವ್ಲಾ ತನ್ನ 11 ವರ್ಷ ಮಗ ದಕ್ಷನೊಂದಿಗೆ 13ನೇ ಮಹಡಿಯಿಂದ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ.
ಸಾಕ್ಷಿ ಪತಿಗೆ ಬರೆದಿದ್ದ ಡೆತ್‌ನೋಟ್ ಪತ್ತೆಯಾಗಿದೆ. ʻನಾವು ಈ ಲೋಕವನ್ನು ತೊರೆಯುತ್ತಿದ್ದೇವೆ.. ಕ್ಷಮಿಸಿ… ನಾವು ಇನ್ಮುಂದೆ ನಿಮಗೆ ತೊಂದರೆ ಕೊಡಲು ಬಯಸುವುದಿಲ್ಲ. ನಮ್ಮಿಂದಾಗಿ ನಿಮ್ಮ ಜೀವನ ಹಾಳಾಗಬಾರದು. ನಮ್ಮ ಸಾವಿಗೆ ಯಾರೂ ಕಾರಣವಲ್ಲʼ ಎಂದು ಬರೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.