ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಯ್ಯನ ಅಗ್ರಹಾರ ಗ್ರಾಮದಲ್ಲಿ ಅಕ್ರಮ ಸಂಬಂಧ ಹಿನ್ನೆಲೆ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಚ್ಚಿ ಕೊಲೆ ಮಾಡಲು ಯತ್ನಿಸಲಾಗಿದೆ. ಹಲ್ಲೆಗೊಳಗಾದ ಕಾರ್ತಿಕ್ (26) ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ, ಹಲ್ಲೆ ವೇಳೆ ತಡೆಯಲು ಹೋದ ಯುವಕನ ತಂದೆ ಮಧುಸೂದನ್ ಅವರ ಮೇಲೂ ಹಲ್ಲೆಯಾಗಿದೆ.
ದೀಪಾ ಎಂಬ ಮಹಿಳೆ ಜೊತೆ ಕಾರ್ತಿಕ್ ಅಕ್ರಮ ಸಂಬಂಧ ಹೊಂದಿದ್ದರು ಎಂಬ ಆರೋಪ ಕೇಳಿಬಂದಿದ್ದು, ಈ ವಿಚಾರವಾಗಿ ಜಗಳ ನಡೆದು, ವಿಷಯ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿತ್ತು. ಪೊಲೀಸರು ರಾಜಿ ಸಂಧಾನ ಮಾಡಿ ಕಳುಹಿಸಿದ್ದರು.
ಈಗ ಮಹಿಳೆಯೇ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿಸಿದ್ದಾಳೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಪತ್ನಿ, ಕುಟುಂಬಸ್ಥರ ಮೇಲೆ ಪೆಟ್ರೋಲ್ ಸುರಿದು ಕೊಲೆಗೆ ಯತ್ನ
ಗಂಡನ ಮನೆಯಲ್ಲಿ ಕಿರುಕುಳಕ್ಕೆ ಬೇಸತ್ತು ತವರು ಮನೆಗೆ ಬಂದಿದ್ದ ಪತ್ನಿ ಹಾಗೂ ಆಕೆಯ ಕುಟುಂಬಸ್ಥರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿರುವ ಘಟನೆ ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ನಡೆದಿದೆ. ಆರೋಪಿ ಭೀಮಪ್ಪ ಭೋಸಲೆಯನ್ನು ಪೊಲೀಸರು ಬಂಧಿಸಿದ್ದಾರೆ.
ಅಥಣಿ ತಾಲೂಕಿನ ಯಲಿಹಡಲಗಿ ಗ್ರಾಮದ ನಿವಾಸಿ ಭೀಮಪ್ಪನ ಕಿರುಕುಳ ತಾಳಲಾರದೆ ಪತ್ನಿ ರಾಣಿ ಭೋಸಲೆ ತವರಿಗೆ ಬಂದಿದ್ದಳು. ತನ್ನ ಪತ್ನಿಯನ್ನು ತವರು ಮನೆಗೆ ಕರೆದುಕೊಂಡು ಹೋಗಿದ್ದೀರಿ ಎಂದು ಸಿಟ್ಟಾಗಿ ಭೀಮಪ್ಪ ಆರು ಜನರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದಾನೆ.
ಘಟನೆಯಲ್ಲಿ ಸಂಜು ಸಾಳುಂಕೆ, ಶಂಕರ್ ಸಾಳುಂಕೆ, ಕೃಷ್ಣಾ ಸಾಳುಂಕೆ, ಅಂಕುಶ ಪಡತಾರೆ, ಮನೋಹರ ಪಡತಾರೆ, ರಾಣಿ ಭೋಸಲೆಗೆ ಗಂಭೀರ ಗಾಯವಾಗಿ ವಿಜಯಪುರದ ಬಿಎಲ್ಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


