ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರದೊಡ್ಡಿ ಗ್ರಾಮದಲ್ಲಿ ಗ್ರಾ.ಪಂ ಸದಸ್ಯೆ ಚಂದ್ರಕಲಾ ಪತಿ ಲೋಕೇಶ್ ಸಾವು ಆತ್ಮಹತ್ಯೆ ಅಲ್ಲ ಕೊಲೆ ಎಂಬುದನ್ನು ಪೊಲೀಸ್ ತನಿಖೆ ಬಹಿರಂಗಪಡಿಸಿದೆ. ಹೆಂಡತಿಯೇ ಪ್ರಿಯಕರನ ಜೊತೆ ಸೇರಿ ಆತನ ಕೊಲೆ ಮಾಡಿರುವುದು ಬಯಲಾಗಿದೆ.
ಜೂ. 24ರಂದು ಕೃಷ್ಣಾಪುರದೊಡ್ಡಿ ಗ್ರಾಮದಲ್ಲಿ ಗ್ರಾ.ಪಂ ಸದಸ್ಯೆ ಚಂದ್ರಕಲಾ ಪತಿ ಲೋಕೇಶ್ (45) ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಲೋಕೇಶ್ ಶವದ ಬಳಿ ವಿಷದ ಬಾಟಲಿ ಇಟ್ಟು, ಆತ್ಮಹತ್ಯೆ ಎಂದು ನಂಬಿಸಲಾಗಿತ್ತು. ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಚಂದ್ರಕಲಾ ಸುದ್ದಿಗೋಷ್ಠಿ ನಡೆಸಿ, ಪತಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಳು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಚಂದ್ರಕಲಾ ಫೋನ್‌ನಿಂದ ಆಕೆಯ ಅನೈತಿಕ ಸಂಬಂಧದ ಸುಳಿವು ಸಿಕ್ಕಿತ್ತು. ಯೋಗೇಶ್ ಎಂಬಾತನೊಂದಿಗೆ ಚಂದ್ರಕಲಾ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಇದಕ್ಕೆ ಪತಿ ಅಡ್ಡಿಯಾಗಿದ್ದರಿಂದ ಪ್ರಿಯಕರನ ಜೊತೆ ಸೇರಿ ಕೊಲೆಗೆ ಸಂಚು ರೂಪಿಸಿದ್ದಳು.
ಬೆಂಗಳೂರಿನ ನಾಲ್ವರಿಗೆ ತನ್ನ ಪತಿಯನ್ನು ಕೊಲೆ ಮಾಡುವಂತೆ ಸುಫಾರಿ ನೀಡಿದ್ದಳು. ಎಂ.ಕೆ.ದೊಡ್ಡಿ ಪೊಲೀಸರು ಆರೋಪಿ ಗ್ರಾ.ಪಂ ಸದಸ್ಯೆ ಚಂದ್ರಕಲಾಳನ್ನ ಬಂಧಿಸಿದ್ದು, ಉಳಿದ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಿದ್ದಾರೆ.