ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅಪರಾಧಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದ್ದು, ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಅವರು ಗಂಗಾವತಿ ಶಾಸಕ ಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
ಆಂಧ್ರಪ್ರದೇಶದ ಓಬಳಾಪುರಂನಲ್ಲಿ ನಡೆದ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 13 ವರ್ಷಗಳ ವಿಚಾರಣೆ ಬಳಿಕ ಈ ತೀರ್ಪು ಬಂದಿದೆ. ಈ ಪ್ರಕರಣದಲ್ಲಿ 3000ಕ್ಕೂ ಹೆಚ್ಚು ದಾಖಲೆಗಳನ್ನು ಪರಿಶೀಲಿಸಲಾಗಿದ್ದು, 219 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿತ್ತು. ಟಪಾಲ್ ಗಣೇಶ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯ ಜನಾರ್ದನ ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಒಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ – ಪ್ರತಿವಾದ ಆಲಿಸಿದ್ದ ಹೈದರಾಬಾದ್ ಸಿಬಿಐ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು.
ನಿಯಮದ ಪ್ರಕಾರ 3 ವರ್ಷಕ್ಕಿಂತ ಹೆಚ್ಚು ವರ್ಷದ ಜೈಲು ಶಿಕ್ಷೆಗೆ ಗುರಿಯಾದ ಜನಪ್ರತಿನಿಧಿಗಳು ಸ್ಥಾನ ಕಳೆದುಕೊಳ್ಳುತ್ತಾರೆ.
ಓಬಳಾಪುರಂ ಅಕ್ರಮ ಗಣಿಗಾರಿಕೆ ಮತ್ತು ಗಡಿ ಒತ್ತುವರಿ ಪ್ರಕರಣದಲ್ಲಿ ಈಗಾಗಲೇ 4 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದೇನೆ. ಜನಸೇವೆಯಲ್ಲಿ ತೊಡಗಿ ಕೊಂಡಿದ್ದೇನೆ. ಗಂಗಾವತಿ ಮತ್ತು ಬಳ್ಳಾರಿ ಕ್ಷೇತ್ರಗಳ ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಕ್ಷೆಯ ಪ್ರಮಾಣ ಕಡಿತ ಮಾಡುವಂತೆ ಜನಾರ್ದನ ರೆಡ್ಡಿ ಮನವಿ ಮಾಡಿದರು. ಜನಾರ್ದನ ರೆಡ್ಡಿ ಮನವಿಯನ್ನು ತಿರಸ್ಕರಿಸಿದ ನ್ಯಾಯಾಧೀಶರು ನಿಮಗೆ ಜೀವಾವಧಿ ಶಿಕ್ಷೆ ಕೊಡಬೇಕು. 4 ವರ್ಷ ಕಡಿಮೆ ಮಾಡಿ 10 ವರ್ಷ ಜೈಲು ಶಿಕ್ಷೆ ಜಾರಿ ಮಾಡಲೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜನಾರ್ದನ ರೆಡ್ಡಿ ಅವರನ್ನು ಸಿಬಿಐ ಕೋರ್ಟ್‌ನಿಂದ ಹೈದರಾಬಾದ್ ಸಮೀಪದ ಚಂಚಲಗುಡ ಜೈಲಿಗೆ ರವಾನಿಸಲಾಗಿದೆ. ತೀರ್ಪಿನ ವಿರುದ್ದ ಅವರ ಪರ ವಕೀಲರು ಹೈಕೋರ್ಟ್‌ಗೆ ಮೇಲ್ಮಮನವಿ ಸಲ್ಲಿಸುವ ಸಾಧ್ಯತೆ ಇದೆ. ಹೈಕೋರ್ಟ್ ಮಧ್ಯಂತರ ಆದೇಶ ಬರುವವರೆಗೂ ಅವರು ಜೈಲಿನಲ್ಲಿರಬೇಕಾಗುತ್ತದೆ.
ಪ್ರಕರಣದ ವಿವರ: ಜನಾರ್ದನ ರೆಡ್ಡಿ ಅವರ ಒಎಂಸಿ ಕಂಪನಿಗೆ ಓಬಳಾಪುರಂ ಮತ್ತು ಡಿ. ಹಿರೇಹಾಳದಲ್ಲಿ ಕ್ರಮವಾಗಿ 68.5 ಹೆಕ್ಟೇರ್ ಮತ್ತು 39.5 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ಗುತ್ತಿಗೆ ವಿಚಾರದಲ್ಲಿ ಅಕ್ರಮವಾಗಿದೆ ಎಂಬ ಆರೋಪವಿದೆ. ಅಂದಿನ ಅವಿಭಜಿತ ಆಂಧ್ರ ಪ್ರದೇಶ ಸರ್ಕಾರ ಕಬ್ಬಿಣದ ಅದಿರು ಗಣಿಗಾರಿಕೆ ಗುತ್ತಿಗೆ ನೀಡುವ ವೇಳೆ ಇತರೆ ಎಲ್ಲಾ ಗುತ್ತಿಗೆದಾರರನ್ನು ಬಿಟ್ಟು ಒಎಂಸಿ ಕಂಪನಿಗೆ ಗುತ್ತಿಗೆ ಕೊಡಿಸಿತ್ತು ಎಂಬ ಆರೋಪವೂ ಇತ್ತು. ಸಿಬಿಐ 2009 ರಲ್ಲಿ ಒಎಂಸಿ ಕಂಪನಿಯ ಅಕ್ರಮ ಗಣಿಗಾರಿಕೆ ಆರೋಪ ಸಂಬಂಧ ತನಿಖೆ ಪ್ರಾರಂಭಿಸಿತ್ತು. ಈ ಅಕ್ರಮದಿಂದ ಆಂಧ್ರ ಪ್ರದೇಶ ಸರ್ಕಾರಕ್ಕೆ 884 ಕೋಟಿ ರೂ. ನಷ್ಟ ಎಂದು ಸಿಬಿಐ ತನಿಖೆ ಮಾಡಿ ಬೆಳಕಿಗೆ ತಂದಿತ್ತು.
ಯಾರೆಲ್ಲ ಆರೋಪಿಗಳು: ಶಾಸಕ ಗಾಲಿ ಜನಾರ್ದನ ರೆಡ್ಡಿ, ನಿವೃತ್ತ ಐಎಎಸ್ ಅಧಿಕಾರಿ ಕೃಪಾನಂದಂ, ತೆಲಂಗಾಣದ ಮಾಜಿ ಸಚಿವೆ ಹಾಗೂ ಹಾಲಿ ಶಾಸಕಿ ಸಬಿತಾ ಇಂದ್ರಾರೆಡ್ಡಿ, 2022ರಲ್ಲಿ ಸೇವೆಯಿಂದ ಬಿಡುಗಡೆಯಾದ ಐಎಎಸ್ ಅಧಿಕಾರಿ ವೈ. ಶ್ರೀಲಕ್ಷ್ಮಿ, ಅಂದಿನ ಗಣಿ ಇಲಾಖೆಯ ಸಹಾಯಕ ನಿರ್ದೇಶಕ ದಿವಂಗತ ಆರ್. ಲಿಂಗಾ ರೆಡ್ಡಿ, ಒಎಂಸಿ ವ್ಯವಸ್ಥಾಪಕ ನಿರ್ದೇಶಕ ಬಿ.ವಿ ಶ್ರೀನಿವಾಸ ರೆಡ್ಡಿ, ಜನಾರ್ದನ ರೆಡ್ಡಿ ಆಪ್ತ ಸಹಾಯಕ ಮೆಫಾಜ್ ಅಲಿ ಖಾನ್
ಗಣಿ ಇಲಾಖೆಯ ಮಾಜಿ ನಿರ್ದೇಶಕ ವಿ ಡಿ ರಾಜಗೋಪಾಲ್. ಇವರಲ್ಲಿ ವಿ.ಡಿ.ರಾಜಗೋಪಾಲ್, ದಿ. ರಾವ್ ಲಿಂಗಾರೆಡ್ಡಿ, ಕೆ.ಮೆಹಫೂಸ್ ಅಲಿ ಖಾನ್ ಕೂಡ ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿದೆ.
ರೆಡ್ಡಿ ಪತ್ನಿ ಜಿ ಲಕ್ಷ್ಮಿ ಅರುಣಗೆ ನೊಟೀಸ್
ರಾಜ್ಯ ಹೈಕೋರ್ಟ್ ಸಿಬಿಐ ಮತ್ತು ಮಾಜಿ ಸಚಿವ ಗಣಿಧನಿ ಜಿ ಜನಾರ್ದನ ರೆಡ್ಡಿ ಅವರ ಪತ್ನಿ ಜಿ ಲಕ್ಷ್ಮಿ ಅರುಣ ಅವರಿಗೆ ನೊಟೀಸ್ ಜಾರಿ ಮಾಡಿದೆ. ಅಕ್ರಮ ಗಣಿಗಾರಿಕೆ ಮತ್ತು ಕಲ್ಲಿದ್ದಲು ಗಣಿಯನ್ನು ಅಕ್ರಮವಾಗಿ ರಫ್ತು ಮಾಡಿರುವ ಕೇಸಿಗೆ ಸಂಬಂಧಪಟ್ಟಂತೆ ಸಿಬಿಐ ವಿಶೇಷ ನ್ಯಾಯಾಲಯ ಲಕ್ಷ್ಮಿ ಅರುಣ ಅವರನ್ನು ಕೇಸಿನಿಂದ ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ಸಮಾಜ ಪರಿವರ್ತನ ಸಮುದಾಯ ಕ್ರಿಮಿನಲ್ ಮೊಕದ್ದಮೆ ದಾಖಲಿಸಿತ್ತು.