Menu

ಅಕ್ರಮ ಆಸ್ತಿ ಆರೋಪ: ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ

lokayukta

ಅಕ್ರಮ ಆಸ್ತಿ ಹೊಂದಿರುವ ಆರೋಪದಡಿ ಶಿವಮೊಗ್ಗ, ಬಳ್ಳಾರಿ, ಬೆಳಗಾವಿಯ ಹಲವು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಿಂದುಳಿದ ವರ್ಗಗಳ ಅಧಿಕಾರಿ ಶೋಭಾ ಅವರ ಶಿವಮೊಗ್ಗದ ನವಲೆ ಬಡಾವಣೆಯ ರೂಂ, ಶಿಕಾರಿಪುರದ ಚನ್ನಕೇಶವ ನಗರದ ಮನೆ, ಶಿಕಾರಿಪುರ ತಾಲೂಕು ತರಲಘಟ್ಟದ ತೋಟದ ಮನೆ, ಸಾಗರ ತಾಲೂಕು ಆಚಾಪುರದ ಮಲ್ನಾಡ್ ಇಂಟರ್ ನ್ಯಾಶನಲ್ ಸ್ಕೂಲ್​ಗಳ ಮೇಲೆ ದಾಳಿ ನಡೆಸಲಾಗಿದೆ.

ಬಿಸಿಎಂ ಇಲಾಖೆಯ ಅಧಿಕಾರಿ ರಾಘವೇಂದ್ರ ಅವರ ಶಿವಮೊಗ್ಗದ ಚಾಲುಕ್ಯನಗರ ಬಡಾವಣೆಯ ಮನೆ ಹಾಗೂ ಬಾಲರಾಜ್ ಅರಸ್ ರಸ್ತೆಯ ದೇವರಾಜ್ ಅರಸ್ ಭವನದ ಕಚೇರಿಗಳ ಮೇಲೆಯೂ ದಾಳಿ ನಡೆದಿದೆ.  ಶಿವಮೊಗ್ಗ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸ್ ಇನ್ಸ್​ಪೆಕ್ಟರ್​ ರುದ್ರೇಶ್ ಆರು ತಂಡಗಳಲ್ಲಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಬಳ್ಳಾರಿ ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕರ ಮನೆ ಹಅಗೂ ಕಚೇರಿ ಮೇಲೆ ದಾಳಿಯಾಗಿದೆ. ಬಳ್ಳಾರಿಯ ಕಚೇರಿ ಸಿದ್ಧಾರ್ಥ್ ನಗರದ ಮನೆ ಸೇರಿದಂತೆ ಒಟ್ಟು ನಾಲ್ಕು ಕಡೆ ದಾಳಿ ನಡೆಸಲಾಗಿದೆ. ಹಲವು ಆರೋಪಗಳೊಂದಿಗೆ ಈ ಅಧಿಕಾರಿ ವಿರುದ್ಧ ದೂರುಗಳಿದ್ದವು ಎನ್ನಲಾಗಿದೆ.

ಬೆಳಗಾವಿಯಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಎಇಇ ನಿವಾಸಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದರು. ಆಂಜನೇಯ ನಗರದಲ್ಲಿನ ಮೂರು ಮನೆಗಳಲ್ಲಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಹುಕ್ಕೇರಿ, ಅಥಣಿ ತಾಲೂಕಿನಲ್ಲಿರುವ ಅಜಿತ್ ಸಿಂಗ್ ರಜಪೂತ್ ಮನೆಗಳ ಮೇಲೂ ದಾಳಿ ಮಾಡಲಾಗಿದೆ. ದಾಳಿ ವೇಳೆ ಮಹತ್ವದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಲೋಕಾಯುಕ್ತ ಡಿಎಸ್​ಪಿ ಬಿ. ಎಸ್. ಪಾಟೀಲ, ಭರತ ರೆಡ್ಡಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.

Related Posts

Leave a Reply

Your email address will not be published. Required fields are marked *