ಆರ್ ಎಸ್ ಎಸ್ ಬ್ಯಾನ್ ಮಾಡಲು ಪತ್ರ ಬರೆದಿರುವ ಸಚಿವ ಪ್ರಿಯಾಂಕ್ ಖರ್ಗೆಗೆ ತಾಕತ್ತಿದ್ದರೆ ಪಿಎಫ್ ಐ, ಎಸ್ ಡಿಪಿಐ ಬ್ಯಾನ್ ಮಾಡಲಿ ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ಸವಾಲು ಹಾಕಿದರು.
ಗದಗ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ ಎಸ್ ಎಸ್ ಭಾರತದ ಅಖಂಡತೆ ಮತ್ತು ಏಕತೆಯನ್ನು ಗೌರವಿಸುತ್ತದೆ. ನೆಹರೂ ಸಹ ಈ ಸಂಘಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಹಿಂದಿನ ಹತ್ತಾರು ಜನ ಕಾಂಗ್ರೆಸ್ ನಾಯಕರಿಂದಲೇ ಆರ್ ಸ್ಎಸ್ ಬ್ಯಾನ್ ಮಾಡಲು ಸಾಧ್ಯವಾಗಿಲ್ಲ. ಈಗ ಬ್ಯಾನ್ ಮಾಡಲು ಪ್ರಿಯಾಂಕ್ ಖರ್ಗೆ ಯಾವ ಪುಟಗೋಸಿ ನಾಯಕ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.
ಇನ್ನು ಪ್ರಿಯಾಂಕ್ ಖರ್ಗೆ ಬರೆದ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ ತಕ್ಷಣ ಷರಾ ಬರೆದು ಅಧಿಕಾರಿಗಳಿಗೆ ಕಳುಹಿಸಿರುವುದು ನೋಡಿದರೆ ಡಿಸೆಂಬರ್ (ಕ್ರಿಸ್ ಮಸ್ ) ಹತ್ತಿರ ಬರುತ್ತಿರುವುದು ಸ್ಪಷ್ಟವಾಗುತ್ತದೆ. ಅಲ್ಪಸಂಖ್ಯಾತ ಮತಗಳ ಓಲೈಕೆಗಾಗಿ ಕಾಂಗ್ರೆಸ್ ಆರ್ ಎಸ್ ಎಸ್ ಮೇಲೆ ಮುಗಿಬಿದ್ದಿದೆ. ಇದರಿಂದ ಸಂಘಟನೆಗೆ ಯಾವುದೇ ಹಾನಿ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
2002 ರಲ್ಲಿ ಬೆಂಗಳೂರಿನಲ್ಲಿ ನಡೆದ ಸಮರಸತಾ ಸಂಗಮ ಕಾರ್ಯಕ್ರಮದ ಸಮಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಭೇಟಿ ನೀಡಿ ಆರ್.ಎಸ್.ಎಸ್ ಕಾರ್ಯಗಳನ್ನು ಮೆಚ್ಚಿಕೊಂಡಿದ್ದಾರೆ. ಹೀಗಾಗಿ ಪ್ರಿಯಾಂಕ್ ಖರ್ಗೆ ಅವರು ಹಿಂದಿನ ಇತಿಹಾಸವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಯಸ್ಸು, ಅಧಿಕಾರ, ಹಣ ಏಕಕಾಲಕ್ಕೆ ಬಂದಿರುವುದರಿಂದ ಪ್ರಿಯಾಂಕ್ ಖರ್ಗೆ ಈ ರೀತಿ ಮಾತಾಡುತ್ತಿದ್ದಾರೆ. ಮೊದಲು ತಮ್ಮ ಕ್ಷೇತ್ರದ ಶಿಕ್ಷಣ ವ್ಯವಸ್ಥೆ ಯಾವ ಮಟ್ಟದಲ್ಲಿದೆ ಎನ್ನುವುದನ್ನು ನೋಡಲಿ. ರಾಜ್ಯದ ಗುಂಡಿ ಮುಚ್ಚಲು ಯೋಗ್ಯತೆ ಇಲ್ಲದವರು ಶತಮಾನದ ಇತಿಹಾಸ ಹೊಂದಿರುವ ಆರ್ ಎಸ್ ಎಸ್ ಬ್ಯಾನ್ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದರೂ ರಾಜ್ಯದಲ್ಲಿ ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲ. ಬೇಜವಾಬ್ದಾರಿ ಹಣಕಾಸಿನ ನಿರ್ವಹಣೆಯಿಂದಾಗಿ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ. ಆಡಳಿತ ವೈಫಲ್ಯದ ಗಮನ ಬೇರೆಡೆ ಸೆಳೆಯಲು ಸರ್ಕಾರವು ತಂತ್ರಗಳನ್ನು ಅನುಸರಿಸುತ್ತಿದೆ. ಅದರಲ್ಲಿ ಆರ್ ಎಸ್ ಎಸ್ ಬ್ಯಾನ್ ವಿಷಯವೂ ಒಂದಾಗಿದೆ ಎಂದು ಆಪಾದಿಸಿದರು.
ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿರುವ ಕಾಂಗ್ರೆಸ್ ಸರಕಾರಕ್ಕೆ ನಿಜವಾಗಿಯೂ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇದ್ದರೆ, ಆ ಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಕೌಶಲ ತರಬೇತಿ ನೀಡಲಿ ಎಂದ ಸಿ.ಸಿ. ಪಾಟೀಲ, ಒಂದು ವೇಳೆ ಅಲ್ಪಸಂಖ್ಯಾತರು ಶಿಕ್ಷಣವಂತರಾದರೆ ಕಾಂಗ್ರೆಸ್ ಬೆಂಬಲಿಸುವುದಿಲ್ಲ ಎನ್ನುವ ಕಾರಣಕ್ಕೆ ಅಲ್ಪಸಂಖ್ಯಾತ ಮತ್ತು ದಲಿತ ಸಮುದಾಯವನ್ನು ಕೇವಲ ಮತಬ್ಯಾಂಕ್ ಆಗಿ ಮಾತ್ರ ಬಳಸಿ ತುಳಿಯುವ ಪ್ರಯತ್ನವನ್ನು ಕಾಂಗ್ರೆಸ್ ನಿರಂತರವಾಗಿ ಮಾಡುತ್ತಿದೆ ಎಂದು ಆರೋಪಿಸಿದರು.
ಯಾವುದೇ ಜನಪ್ರತಿನಿಧಿಯೊಬ್ಬರಿಗೆ ಕೀಳಾಗಿ ‘ಕರಿಟೋಪಿ ಎಂಎಲ್ಎ’ ಎಂದು ಒಬ್ಬ ಉಪಮುಖ್ಯಮಂತ್ರಿ ಕರೆಯುವುದು ಶೋಭೆ ತರುವಂತಹದ್ದಲ್ಲ. ಒಂದು ವೇಳೆ ಕೇಂದ್ರ ಮಂತ್ರಿಯೊಬ್ಬರು ಡಿ.ಕೆ. ಶಿವಕುಮಾರ ಅವರಿಗೆ ಶಾಲು ಹಾಕಿದ ಮಂತ್ರಿ ಎಂದು ಕರೆದರೆ ಹೇಗಾಗುತ್ತದೆ? ಜನಪ್ರತಿನಿಧಿಯೊಬ್ಬರನ್ನು ಹೀಗೆ ಕರೆದಿರುವುದು ಅಧಿಕಾರದ ಮದ ಏರಿರುವುದನ್ನು ತೋರಿಸುತ್ತದೆ ಎಂದು ಸಿ.ಸಿ. ಪಾಟೀಲ ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ನಗರಸಭೆ ಮಾಜಿ ಅಧ್ಯಕ್ಷೆ ಉಷಾ ದಾಸರ, ಬಿಜೆಪಿ ಮುಖಂಡರಾದ ಎಂ.ಎಸ್. ಕರಿಗೌಡ್ರ, ಸಿದ್ದಪ್ಪ ಪಲ್ಲೇದ, ಅನಿಲ ಅಬ್ಬಿಗೇರಿ, ರಾಘವೇಂದ್ರ ಯಳವತ್ತಿ, ಶಿವು ಹಿರೇಮನಿಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.