ಶ್ರಮಿಕ ವರ್ಗಕ್ಕಾಗಿ ಸೆಸ್‌ನಲ್ಲಿ ಹಣವನ್ನು ಮೀಸಲಿಟ್ಟು, ಸುಮಾರು 1.30 ಕೋಟಿ ಕಾರ್ಮಿಕ ಶ್ರಮಿಕ ಸಮುದಾಯದಲ್ಲಿ ಕಾರ್ಮಿಕರು ಅಪಘಾತದಲ್ಲಿ ಮೃತಪಟ್ಟರೆ ಅವಲಂಬಿತ ಕುಟುಂಬಕ್ಕೆ ಇಲಾಖೆಯ ಮೂಲಕ 15 ಲಕ್ಷ ಪರಿಹಾರ ನೀಡುವ ಕುರಿತು ಯೋಜನೆಯನ್ನು ರೂಪಿಸಲಾಗಿದೆ. ಮುಂದಿನ ದಿನದಲ್ಲಿ ಮುಖ್ಯಮಂತ್ರಿಗಳಿಂದ ಅನುಮೋದನೆ ಪಡೆದು ಜಾರಿಗೊಳಿಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಹೇಳಿದ್ದಾರೆ.
ಹಾಸನ ನಗರದ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಆಡಿಟೋರಿಯಮ್‌ನಲ್ಲಿಂದು ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಬೆಂಗಳೂರು, ಸಾರಿಗೆ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಹಾಸನ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಿನಿಮಾ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ದುಡಿಯುತ್ತಿರುವ ಕಾರ್ಮಿಕರನ್ನು ನೋಂದಾಯಿಸಿ ಸಾಮಾಜಿಕ ಭದ್ರತೆ ಒದಗಿಸಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಆನ್ ಲೈನ್ ಪ್ಲಾಟ್ ಫಾರಂನಲ್ಲಿ ಕೆಲಸ ಮಾಡುವ ಗಿಗ್ ಕಾರ್ಮಿಕರು 4 ರಿಂದ 5 ಲಕ್ಷ ಜನ ಇದ್ದಾರೆ ಇವರನ್ನು ಇಲಾಖೆ ವ್ಯಾಪ್ತಿಗೆ ತರುವ ಮೂಲಕ ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತಾ ಮತ್ತು ಕಲ್ಯಾಣ ಅಧಿನಿಯಮ 2025 ಅನ್ನು ಜಾರಿಗೆ ತರಲಾಗಿದೆ. ಚಾಲಕ, ನಿರ್ವಾಹಕ, ಕ್ಲೀನರ್, ಬುಕ್ಕಿಂಗ್ ಗುಮಾಸ್ತ, ನಗದು ಗುಮಾಸ್ತ, ಕಾವಲುಗಾರ ಪರಿಚಾಲಕ, ಮೋಟರ್ ಗ್ಯಾರೇಜುಗಳಲ್ಲಿ ಎಲೆಕ್ಟ್ರಿಕಲ್ ಹಾಗೂ ಎಸಿ ಘಟಕಗಳಲ್ಲಿ ಇತರೆ ಕೆಲಸ ಮಾಡುತ್ತಿರುವ ಸುಮಾರು 10 ಲಕ್ಷ ಕಾರ್ಮಿಕರ ರಾಜ್ಯ ಮೋಟಾರು ಸಾರಿಗೆ ಹಾಗೂ ಇತರೆ ಸಂಬಂಧಿತ ಕಾರ್ಮಿಕ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ದಿ ಮಂಡಳಿಯಲ್ಲಿ ನೋಂದಾಯಿ ಸಿಕೊಂಡಿದ್ದಾರೆ ಹಾಸನ ಜಿಲ್ಲೆಯಲ್ಲಿ 37,000 ಜನ ನೋಂದಾಯಿಸಿದ್ದಾರೆ ಸ್ಮಾರ್ಟ್ ಕಾರ್ಡ್ ವಿತರಿಸಲಾಗಿದೆ ಎಂದು ಹೇಳಿದರು.
ಆಶಾ ದೀಪ ಯೋಜನೆಯನ್ನು ಜಾರಿಗೊಳಿಸಿದ್ದು, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಮಕ್ಕಳಿಗೆ ಕೆಲಸ ಕೊಟ್ಟರೆ ಅಂತವರಿಗೆ ಶೇ. 50 ಸಂಬಳ ಕೊಡಲಾಗುವುದು. ರಾಜ್ಯದ 7 ಸಾವಿರ ಮಕ್ಕಳಿಗೆ ಕೆಲಸ ಸಿಕ್ಕಿದ್ದು, 2 ವರ್ಷಗಳವರೆಗೆ ಸಂಬಳ ನೀಡಲಾಗುವುದು. 24,400 ಮಕ್ಕಳಿಗೆ 20 ಕೋಟಿ, 9 ಕೋಟಿ ರೂ.ವಿವಾಹ ಪ್ರೋತ್ಸಾಹ ಧನ, 3 ಕೋಟಿ ವೈದ್ಯಕೀಯ ಸೌಲಭ್ಯಕ್ಕಾಗಿ, ವಿವಿಧ ಯೋಜನೆಗಳಡಿಯಲ್ಲಿ 54 ಕೋಟಿ ರೂ ಗಳನ್ನು ಜಿಲ್ಲೆಯ ಕಾರ್ಮಿಕರಿಗೆ ನೀಡಿದ್ದೇವೆ ಎಂದು ಸಚಿವರು ತಿಳಿಸಿದರು.
ಸರ್ಕಾರಿ ಕಚೇರಿಗಳಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವವರ ಶ್ರೇಯೋಭಿವೃದ್ಧಿಗಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಾರ್ಮಿಕರ ವಿವಿದ್ದೋಶ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ನಿಯೋಜಿಸಿಕೊಳ್ಳಲು ಯೋಜಿಸಲಾಗಿದ್ದು ಸಚಿವ ಸಂಪುಟದ ಉಪ ಸಮಿತಿಯನ್ನು ರಚಿಸಲಾಗಿದೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುವುದು. ನಮ್ಮ ಸರ್ಕಾರ ಐದು ಗ್ಯಾರೆಂಟಿಗಳ ಮೂಲಕ ವರ್ಷಕ್ಕೆ 60 ಸಾವಿರ ಕೋಟಿ ವೆಚ್ಚ ಮಾಡುತ್ತದೆ, 3 ಲಕ್ಷ ಕೋಟಿ ರೂಪಾಯಿಯನ್ನು ಬಡವರಿಗೆ ವೆಚ್ಚ ಮಾಡುತ್ತಿದ್ದೇವೆ. ಶಕ್ತಿ ಯೋಜನೆಯಿಂದ 500 ಕೋಟಿ ಹೆಣ್ಣು ಮಕ್ಕಳು ಪ್ರಯಾಣ ಮಾಡುವ ಮೂಲಕ ರಾಜ್ಯದ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ ಎಂದರು.
ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಎಂ ಶಿವಲಿಂಗೇಗೌಡ, ಸಂಸದರಾದ ಶ್ರೇಯಸ್ ಎಂ ಪಟೇಲ್ ಮಾತನಾಡಿ, ಕಾರ್ಮಿಕರ ಪರವಾಗಿ ಶ್ರದ್ಧೆಯಿಂದ ಸಚಿವರು ಕೆಲಸ ಮಾಡುತ್ತಿದ್ದಾರೆ. 25 ರಿಂದ 101 ವಲಯಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಅರ್ಹರು ಇದರ ಪ್ರಯೋಜನ ಪಡೆಯಬೇಕು ಐತಿಹಾಸಿಕ ಯೋಜನೆಯನ್ನು ರೂಪಿಸಿದ್ದಾರೆ ಎಂದು ಹೇಳಿದರು.
ಕಡೂರು ಕ್ಷೇತ್ರದ ಶಾಸಕರಾದ ಆನಂದ್, ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಿಸಿನ್, ಕಾರ್ಮಿಕ ಇಲಾಖೆ ಆಯುಕ್ತರಾದ ಹೆಚ್.ಎನ್. ಗೋಪಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.