ಸಮುದಾಯವು ಶೈಕ್ಷಣಿಕವಾಗಿ, ಆರ್ಥಿಕವಾಗಿ ಶಕ್ತಿಯುತವಾದಾಗ ರಾಜಕೀಯ ಶಕ್ತಿ ತನ್ನಿಂತಾನೆ ಬರುತ್ತೆ. ಈ ನಿಟ್ಟಿನಲ್ಲಿ ಸಮಾಜಕ್ಕಾಗಿ ಕೆಲಸ ಮಾಡುತ್ತೇನೆ ಎಂದು ನಾವು ಇಂದು ನಿರ್ಧಾರ ಮಾಡೋಣ, ಪ್ರಮಾಣ ಮಾಡೋಣ. ಆಗ ಮಾತ್ರ ನಮ್ಮ ಸಮಾಜ ಸಾಕಷ್ಟು ಅಭಿವೃದ್ಧಿ ಆಗಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಹೇಳಿದ್ದಾರೆ.
ಬೀದರ್ ನ ಗಣೇಶ ಮೈದಾನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸ್ವಾಭಿಮಾನಿ ಮರಾಠಾ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮರಾಠಾ ಸಮಾಜದ ಬಂಧುಗಳು ಕಷ್ಟದಲ್ಲಿದ್ದಾರೆ. ನಾವೆಲ್ಲ ಒಂದಾಗಿ ಒಗ್ಗಟ್ಟಾಗಿ ಸಾಗೋಣ ಎಂದು ಕರೆ ನೀಡಿದರು.
ಬೀದರ್‌ಗೆ ಹಲವಾರು ಬಾರಿ ಬಂದಿದ್ದೆ. ಆಗ ನಮ್ಮ ಸಮಾಜದ ಮುಖಂಡರು ಸಂಘಟನೆ ಮಾಡಬೇಕು, ಸಮಾಜವನ್ನು ಒಂದು ಗೂಡಿಸಬೇಕು ಎಂದು ಮಾತನಾಡಿದ್ದೇವೆ ಈಗ ಕಾಲ ಕೂಡಿ ಬಂದಿದೆ. ಸಮಾಜದ ಎಲ್ಲಾ ಮುಖಂಡರು ಶ್ರದ್ಧೆಯಿಂದ ಕಷ್ಟ ಬಿದ್ದು ಸಮಾಜದ ಬಂಧುಗಳನ್ನು ಸೇರಿಸಿದ್ದೀರಾ. ಇದಕ್ಕಾಗಿ ನಿಮಗೆ ಧನ್ಯವಾದಗಳು ಎಂದರು.
.
ಛತ್ರಪತಿ ಶಿವಾಜಿ ಮಹಾರಾಜರು ಜಾತ್ಯತೀತ ನಾಯಕರಾಗಿದ್ದರು. ಅವರು ಮೊಘಲರ ವಿರುದ್ಧವಿದ್ದರು. ಮುಸ್ಲಿಮರ ವಿರುದ್ಧ ಅಲ್ಲ. ಇದನ್ನು ನಾವು ತಿಳಿಯಬೇಕು. ಸಮಾಜದ ಯುವಕರು ಛತ್ರಪತಿ ಶಿವಾಜಿ ಮಹಾರಾಜರ ವಿಚಾರಗಳನ್ನು ಓದಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸಹಾಯ ಮಾಡಿ ಲಂಡನ್‌ಗೆ ಹೋಗಿ ಉನ್ನತ ಅಧ್ಯಯನ ಮಾಡಲು ಸಹಾಯ ಮಾಡಿದವರು ನಮ್ಮ ಸಮಾಜದ ರಾಜರಾದ ಗಾಯಕ್ವಾಡ್ ಹಾಗೂ ಶಾಹು ಮಹಾರಾಜರು. ಅಂಬೇಡ್ಕರ್ ತಮಗೆ ದೊರೆತ ಸಹಾಯದಿಂದ ಹೊರ ದೇಶದಲ್ಲಿ ಓದಿ ಬಂದರು. ಪ್ರಪಂಚ ಕಂಡ ಬಹುದೊಡ್ಡ ಸುಧಾರಕರ ಅಂಬೇಡ್ಕರ್ ಎಂದು ಹೇಳಿದರು.
ನಾನು ರಾಜ್ಯದಲ್ಲಿ ಎಲ್ಲೆಲ್ಲಿ ಹೋಗುತ್ತೀನೋ ಅಲ್ಲೆಲ್ಲ ಮರಾಠಾ ಸಮಾಜದ ಬಂಧುಗಳು ಕಷ್ಟದಲ್ಲಿ ಇದ್ದಾರೆ. ಪ್ರತಿ ತಿಂಗಳು ನಾನು ಬರಲು ಸಿದ್ಧನಿದ್ದೇನೆ. ನಿಮಗೆ ಬೆಂಬಲ ನೀಡುತ್ತೇನೆ. ಆದರೆ ನಾವೆಲ್ಲ ಒಂದಾಗಬೇಕು. ಒಗ್ಗಟ್ಟಾಗಬೇಕು. ಇಲ್ಲಿ ರಾಜಕೀಯ ಬೇಕಿಲ್ಲ. ಜೀಜಾಬಾಯಿ ಟ್ರಸ್ಟ್ ಆರಂಭಿಸಿ ನಡೆಸಿ ಎಲ್ಲ ಸಹಾಯ ಮಾಡುತ್ತೇನೆ ಎಂದರು.
ಬೀದರ್ ಜಿಲ್ಲೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಮರಾಠ ಸಮಾಜದವರು ಇದ್ದಾರೆ. ನಾವು ಎಲ್ಲಾ ಸಮಾಜದ ಬಂಧುಗಳ ಜೊತೆಗೆ ಸಾಮರಸ್ಯದಿಂದ ಬಾಳೋಣ. ಸಮಾಜವನ್ನು ಕಟ್ಟಬೇಕು. ಬಡ ಸಮಾಜ ಬಂಧುಗಳನ್ನು ಹುಡುಕಬೇಕು, ಅವರನ್ನು ಓದಿಸಬೇಕು. ಸಹಾಯ ಮಾಡಬೇಕು ಎಂಬ ಉದ್ದೇಶದಿಂದ ನಾವೆಲ್ಲ ಈಗ ಒಂದಾಗಿದ್ದೇವೆ. ನನಗೆ ದೇವರು ಒಂದು ಅವಕಾಶ ನೀಡಿದ್ದಾನೆ. ನಮ್ಮ ಸಮಾಜದ ಜೊತೆಗೆ ರಾಜ್ಯದಲ್ಲಿನ ಎಲ್ಲಾ ಶೋಷಿತ ಸಮಾಜದ ಬಂಧುಗಳಿಗೂ ಒಳ್ಳೆಯದಾಗಬೇಕು ಎಂಬುದೇ ನನ್ನ ಅಭಿಲಾಷೆ ಎಂದು ಹೇಳಿದರು.
ಈ ಕಾರ್ಯಕ್ರಮ ನನಗೆ ಸಾಕಷ್ಟು ಶಕ್ತಿ ನೀಡಿದೆ. ನಿಮ್ಮ ಆಶೀರ್ವಾದ ಇರಲಿ. ಮುಂದಿನ ದಿನಗಳಲ್ಲಿ ಜೀಜಾಬಾಯಿ ಟ್ರಸ್ಟ್ ಉತ್ತರ ಕರ್ನಾಟಕದಲ್ಲಿ ನಂಬರ್ ಒನ್ ಟ್ರಸ್ಟ್ ಆಗಲು ಸಹಾಯ ಮಾಡುತ್ತೇನೆ. ಹಂತ ಹಂತವಾಗಿ ಕಾರ್ಯಕ್ರಮ ಮಾಡೋಣ. ಇದು ರಾಜಕೀಯ ಸಮಾವೇಶ ಅಲ್ಲ. ಶಕ್ತಿ ಪ್ರದರ್ಶನ ಅಲ್ಲ. ಇದು ಸಮಾಜದ ಒಗ್ಗಟ್ಟಿನ ಪ್ರದರ್ಶನ. ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒಂದಾಗಬೇಕು ಎಂದರು.


