Menu

ಕಮಿಷನ್ ಕೇಳಿದ್ದರೆ ಗುತ್ತಿಗೆದಾರರು ಲೋಕಾಯುಕ್ತಕ್ಕೆ ದೂರು ನೀಡಲಿ: ಡಿ.ಕೆ. ಶಿವಕುಮಾರ್

“ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಲು ಯಾರಾದರೂ ಕಮಿಷನ್ ಕೇಳಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಿ. ನಮ್ಮ ಸಚಿವರಾದ ಸತೀಶ್ ಜಾರಕಿಹೊಳಿ, ಬೋಸರಾಜು ಅವರು ಇದರಲ್ಲಿ ಭಾಗಿಯಾಗಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ವಿಧಾನಸೌಧ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. ಬಿಲ್ ಪಾವತಿ ಕಮಿಷನ್ ಕೇಳಲಾಗುತ್ತಿದೆ ಎಂಬ ಗುತ್ತಿಗೆದಾರರ ಆರೋಪದ ಬಗ್ಗೆ ಕೇಳಿದಾಗ, “ಬಿಲ್ ಪಾವತಿ ವಿಚಾರವಾಗಿ ಯಾರಾದರೂ ಕಮಿಷನ್ ಕೇಳಿದ್ದರೆ ಅವರು ಲೋಕಾಯುಕ್ತಕ್ಕೆ ದೂರು ನೀಡಲಿ. ಬಿಲ್ ಪಾವತಿ ವಿಚಾರವಾಗಿ ಗುತ್ತಿಗೆದಾರರು ಯಾಕೆ ಸಚಿವರನ್ನು ಕೇಳಬೇಕು. ಅವರಿಗೆ ಇಲಾಖೆಯ ಬಜೆಟ್ ಅರಿವಿಲ್ಲವೇ? ಅನುದಾನವೇ ಇಲ್ಲದಿರುವಾಗ ಅವರು ಗುತ್ತಿಗೆ ಹೇಗೆ ತೆಗೆದುಕೊಂಡರು?” ಎಂದರು.

“ಬಿಜೆಪಿ ಅವಧಿಯಲ್ಲಿ ನನ್ನ ಇಲಾಖೆಯೊಂದರಲ್ಲೇ 1 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಗುತ್ತಿಗೆಯನ್ನು ನೀಡಲಾಗಿದೆ. ಈ ಗುತ್ತಿಗೆ ಬಿಲ್ ಪಾವತಿ ಮಾಡಿಸುವಂತೆ ಶಾಸಕರ ಮೂಲಕ ಮನವಿ ಮಾಡಲಾಗುತ್ತಿದೆ” ಎಂದು ತಿಳಿಸಿದರು.

“ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಒಂದು ವರ್ಷ ಮುಂಚಿತವಾಗಿಯೇ ನಾವು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ್ದೆವು. ಅನುದಾನ ಇಲ್ಲದೆ ಯಾವುದೇ ಕಾಮಗಾರಿ ತೆಗೆದುಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದ್ದೆವು. ಆದರೂ ನಮ್ಮ ಮಾತು ಕೇಳದೆ ಈಗ ರಾಜಕೀಯ ನಾಯಕರ ಮೂಲಕ ಬಿಲ್ ಪಾವತಿಗೆ ಮನವಿ ಪತ್ರ ನೀಡುತ್ತಿದ್ದಾರೆ” ಎಂದು ಹೇಳಿದರು.

ಇಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಚರ್ಚೆ ಬಗ್ಗೆ ಕೇಳಿದಾಗ, “ಜಾತಿಗಣತಿ ವರದಿಯನ್ನು ಮುಖ್ಯಮಂತ್ರಿಗಳಾಗಲಿ, ನಾನಾಗಲಿ ಇನ್ನು ನೋಡಿಲ್ಲ. ಇದನ್ನು ನೋಡಿದ ನಂತರ ಚರ್ಚೆ ಮಾಡಿ ಯಾವ ತೀರ್ಮಾನ ಕೈಗೊಳ್ಳಬೇಕು ಎಂದು ನಿರ್ಧರಿಸುತ್ತೇವೆ. ಈ ವಿಚಾರದ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಲು ಆಗುವುದಿಲ್ಲ” ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *