Monday, September 22, 2025
Menu

ಸಿದ್ದರಾಮಯ್ಯ-ಡಿಕೆಶಿ ಒಗ್ಗಟ್ಟಾಗಿದ್ದರೆ ಎಲ್ಲವೂ ಸಾಧ್ಯ: ಮಲ್ಲಿಕಾರ್ಜುನ ಖರ್ಗೆ

pragati patha

ಜೇವರ್ಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಒಗ್ಗಟ್ಟಾಗಿದ್ದರೆ ಎಲ್ಲವೂ ಸಾಧ್ಯವಾಗಲಿದೆ ಎಂದು ಎಐಸಿಸಿ ಅಧ್ಯಕ್ಷ ಹಾಗೂರಾಜ್ಯಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಕಲಬುರಗಿ ಜಿಲ್ಲೆಯ ಜೇವರ್ಗಿಯಲ್ಲಿ ಶನಿವಾರ ನಡೆದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ ಅಡಿಯಲ್ಲಿ ಕೈಗೆತ್ತಿಕೊಳ್ಳುತ್ತಿರುವ ಕಲ್ಯಾಣ ಪಥ ಯೋಜನೆಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಒಂದೇ ರಸ್ತೆಯಲ್ಲಿ ಹೋದರೆ ಕಾಂಗ್ರೆಸ್ ಪಕ್ಷ ಪ್ರಗತಿ ಪಥದಲ್ಲಿ ಹೋಗುತ್ತದೆ. ಇಬ್ಬರೂ ಬೇರೆ ಬೇರೆ ದಾರಿ ಹಿಡಿದರೆ ಎಲ್ಲರೂ ನಷ್ಟ ಎಂದು ಅವರು ಹೇಳಿದರು.

ನೀರಾವರಿ ಸಚಿವರಾಗಿ, ಡಿಸಿಎಂ ಆಗಿ ಕಲಬುಗರಿಗೆ ಡಿಕೆ ಶಿವಕುಮಾರ್ ಉತ್ತಮ ಕೊಡುಗೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮ ಬಜೆಟ್ ಮಂಡಿಸಿದ್ದಾರೆ. ಅಲ್ಲದೇ ಅವರಿಂದಲೂ ಸಾಕಷ್ಟು ಕೊಡುಗೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಬಂದಿದೆ ಎಂದು ಖರ್ಗೆ ಶ್ಘಾಘಿಸಿದರು.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ ಅಡಿಯಲ್ಲಿ ಕೈಗೆತ್ತಿಕೊಳ್ಳುತ್ತಿರುವ ಕಲ್ಯಾಣ ಪಥ ಯೋಜನೆಗೆ ಅಡಿಗಲ್ಲು ನೆರವೇರಿಸಿ‌ ಅವರು ಮಾತನಾಡುತ್ತಿದ್ದರು.

ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಕಲ್ಯಾಣ ಕರ್ನಾಟಕ ಭಾಗ ಹಿಂದುಳಿದಿದ್ದು. ಈ ಕ್ಷೇತ್ರಗಳ ಅಭಿವೃದ್ದಿ ಅದರಲ್ಲೂ ಶೈಕ್ಷಿಣಿಕ ಅಭಿವೃದ್ದಿಯಾಗಬೇಕು. ಇದಕ್ಕೆ ಈ ಭಾಗದ ಸಂಸದರು ಹಾಗೂ ಶಾಸಕರು ವಿಶೇಷ ಒತ್ತು ನೀಡಬೇಕು ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದರು.

ಕಕ ಭಾಗದ 38 ಗ್ರಾಮೀಣ ವಿಧಾನಸಭಾ ಕ್ಷೇತ್ರದ ಒಟ್ಟು 1166 ಕಿಮಿ ಉದ್ದದ ರಸ್ತೆಯನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಆರ್ಟಿಕಲ್ 371 J ಜಾರಿಯಾಗಿರುವುದಕ್ಕೆ ಉತ್ತರ ಭಾರತದ ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಸೋನಿಯಾಗಾಂಧಿ ಅವರ ಇಚ್ಚೆಯಂತೆ ಈ ಭಾಗಕ್ಕೆ ಈ ಸವಲತ್ತು ಸಿಗುವಂತಾಗಿದೆ. ದೇಶದ ಯಾವ ಕಡೆಗೆ ಇಂತಹ ವಿಶೇಷ ಸೌಲಭ್ಯ ಕೊಟ್ಟಿಲ್ಲ. ಕೆಲ ರಾಜ್ಯಗಳಿಗೆ‌ ಕೊಟ್ಟಿದ್ದಾರೆ. ಆದರೆ ರಾಜ್ಯದ ಭಾಗಕ್ಕೆ ಕೊಟ್ಟಿಲ್ಲ ಎಂದರು.

” ಕಕ ಭಾಗಕ್ಕೆ ವಾರ್ಷಿಕ 5,000 ಕೋಟಿ ಅನುದಾನ ನೀಡಲಾಗುತ್ತಿದೆ ಎನ್ನುವ ಡಿಸಿಎಂ ಮಾತಿಗೆ ಲಘುಹಾಸ್ಯದ ಧಾಟಿಯಲ್ಲೇ ಉತ್ತರಿಸಿದ ಖರ್ಗೆ ಅವರು ಸ್ವಾಮಿ, ಐದು ಸಾವಿರ ಕೋಟಿ ಅಲ್ಲ ಲಕ್ಷ ಕೋಟಿ ಕೊಟ್ಟರು ನಿಮ್ಮಷ್ಟು ನಾವು ಅಭಿವೃದ್ದಿ ಆಗುವುದಿಲ್ಲ. ನಮ್ಮ ಭಾಗ ನಿಮ್ಮಷ್ಟೆ ಅಭಿವೃದ್ಧಿಯಾಗಬೇಕೆಂದರೆ ನಿಮ್ಮಷ್ಟೇ ಸಮಾನವಾದ ಅನುದಾನ ನಮಗೂ ಕೊಡಬೇಕು. ಸರ್ಕಾರದ ಯಾವುದೇ ಯೋಜನೆ ಮೈಸೂರಿನಿಂದ ಪ್ರಾರಂಭವಾಗಿ ದಾವಣಗೆರೆಗೆ ಬಂದು ನಿಂತುಬಿಡುತ್ತದೆ, ಬಳ್ಳಾರಿಯವರೆಗೂ ತಲುಪುವುದಿಲ್ಲ” ಎಂದರು.

ಭೂಮಿ ಇರುವವರು ಶಾಲೆ ಹಾಗೂ ಆಸ್ಪತ್ರೆಗಳನ್ನು ಕಟ್ಟಲು ಜಾಗ ಕೊಡಬೇಕು ಎಂದು ಮನವಿ ಮಾಡಿದ ಕಾಂಗ್ರೆಸ್ ಹಿರಿಯ ನಾಯಕ ಬೆಳಗಾವಿ, ವಿಜಯಪುರದ ಕಡೆಯ ಜನರು ಸರ್ಕಾರದ ಯೋಜನೆಗಳಿಗೆ ಜಮೀನು ನೀಡುತ್ತಿದ್ದಾರೆ. ನಮ್ಮ ಕಡೆ ಕೆಲವರು ತಮ್ಮ ಹಿರಿಯರು ದಾನ ಕೊಟ್ಟಿರುವ ಜಾಗವನ್ನು ವಾಪಸ್ ಕೊಡುವಂತೆ ಕೇಳಿದ ಉದಾಹರಣೆಗಳೂ ಇವೆ ಎಂದು ವಿಷಾದ ವ್ಯಕ್ತಪಡಿಸಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಸ್ಥಾಪನೆಗೆ ಒತ್ತಿ ಹೇಳಿದ ಖರ್ಗೆ, ಬೀದರ್, ಕಲಬುರಗಿ ಹಾಗು ಬಳ್ಳಾರಿಯಿಂದ ಬೆಂಗಳೂರಿಗೆ ರಾಷ್ಟ್ರೀಯ ಹೆದ್ದಾರಿಗಳಿಲ್ಲ. ಈ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮಾತನಾಡಿದ್ದೇನೆ. ರಾಜ್ಯ ಸರ್ಕಾರ ಈ ಯೋಜನೆಗಳಿಗೆ ಅಗತ್ಯವಿರುವ ಭೂಮಿ ಸ್ವಾಧೀನಪಡಿಸಿಕೊಂಡು ಕೊಡಬೇಕು. ಈ ಮಾತು ಶಿವಕುಮಾರ್ ಅವರಿಗೆ ಯಾಕೆ ಹೇಳುತ್ತಿದ್ದೇನೆ ಎಂದರೆ ಸಿದ್ದರಾಮಯ್ಯ ಹಾಗೂ ಶಿವಕುಮಾರ ಜೊತೆಯಾಗಿ ಹೋದರೆ ಮಾತ್ರ ನಮ್ಮ ಕೆಲಸ ಆಗುತ್ತದೆ. ಹಳೆ ಮೈಸೂರು ಹಾಗೂ ಮಲೆನಾಡಿನ ಜನರು ಅರ್ಜಿ ಕೊಟ್ಟು ಯಾಕೆ ಕೆಲಸ ಮಾಡಿಲ್ಲ ಅಂತ ಪ್ರಶ್ನೆ ಮಾಡುತ್ತಾರೆ. ಆದರೆ, ನಮ್ಮ ಭಾಗದ ಜನರು ಯಾಕೆ ಕೆಲಸ ಆಗಿಲ್ಲ ಎಂದು ಕೈಮುಗಿಯುತ್ತಾರೆ ಅಷ್ಟೊಂದು ಮುಗ್ಧರು. ಅಲ್ಲದೆ ನಿಮಗೆ ಶಕ್ತಿ ತುಂಬಿದ್ದೇ ನಮ್ಮ ಭಾಗದ ಜನರು. ನಿಮಗೆ ಶಕ್ತಿ ತುಂಬಿದವರಿಗೆ ನೀವು ಕೆಲಸ ಮಾಡಿ. ಎಲ್ಲ ಕೆಲಸಗಳನ್ನು ಮೈಸೂರಿನಿಂದ ಪ್ರಾರಂಭ ಮಾಡಬೇಡಿ. ಕಲ್ಯಾಣ ದಿಂದ ಪ್ರಾರಂಭಿಸಿ ನಿಮ್ಮ ಕಲ್ಯಾಣವಾಗುತ್ತದೆ. ಕಲ್ಯಾಣದಿಂದ ಕೆಲಸ ಪ್ರಾರಂಭಿಸಿದರೆ ಅದು ಕೊಳ್ಳೆಗಾಲದವರೆಗೆ ಹೋಗುತ್ತದೆ ಆದರೆ ಮೈಸೂರಿನಿಂದ ಪ್ರಾರಂಭಿಸಿದ ಕೆಲಸ ಬೆಂಗಳೂರಿಗೆ ಬಂದು ನಿಲ್ಲುತ್ತಿದೆ ಎಂದರು.

ಕೇಂದ್ರ ಸರ್ಕಾರದ ಅಭಿವೃದ್ದಿ ಯೋಜನೆಗಳಿಗೆ ಅದರಲ್ಲೂ ನರೇಗಾ ಯೋಜನೆಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ ಮಲ್ಲಿಕಾರ್ಜನ ಖರ್ಗೆ, ಮಹಾತ್ಮಾ ಗಾಂಧಿ ಹೆಸರಲ್ಲಿ ಪ್ರಾರಂಭಿಸಿದ ಯೋಜನೆಗೂ ಅನುದಾನ ನೀಡುತ್ತಿಲ್ಲ ಎಂದರು.

ಕಳೆದ ಹನ್ನೊಂದು ವರ್ಷದಲ್ಲಿ ಮೋದಿ ಹನ್ನೊಂದು ಬಹಳ ದೊಡ್ಡ ಸುಳ್ಳು ಹೇಳಿದ್ದಾರೆ ಎಂದು ವಿವರವಾಗಿ ಹೇಳಿದ ಖರ್ಗೆ ಅವರು ಪಟ್ಟಿ ಮಾಡಿದರು.

1) ಹದಿನೈದು ಲಕ್ಷ ಕಪ್ಪುಹಣ ವಾಪಸ್ ತರುತ್ತೇನೆ ಎಂದಿದ್ದರು, ತರಲಿಲ್ಲ.
2) ಪ್ರತಿವರ್ಷ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿದರು, ಎಲ್ಲಿ ಉದ್ಯೋಗ.?

3) ಪೆಟ್ರೋಲ್ ಡಿಸೇಲ್ ದರ ಇಳಿಕೆ ಮಾಡುವುದಾಗಿ ಹೇಳಿದ್ದರು, ನಮ್ಮ ಸರ್ಕಾರದಲ್ಲಿದ್ದ ಬೆಲೆಗಿಂತ ಜಾಸ್ತಿ ಮಾಡಿದ್ದಾರೆ.

4) 2022 ರಲ್ಲಿ ಗಂಗಾ ನದಿ ಸ್ವಚ್ಛೀಕರಣ ಮಾಡುವುದಾಗಿ ಹೇಳಿದ್ದರು, ಎಲ್ಲಿ ಮಾಡಿದರ?

5) ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಉತ್ಪಾದನಾ ಕ್ಷೇತ್ರದ ಅಡಿಯಲ್ಲಿ ನೌಕರಿ ಏನಾಯ್ತು ?

6) 2022.ರಲ್ಲಿ ಎಲ್ಲ ಭಾರತೀಯರಿಗೆ ಪಕ್ಕಾ ಮನೆ ಕಟ್ಟಿಸುವುದಾಗಿ ಹೇಳಿದ್ದರು, ಪಕ್ಕಾ ಇರಲಿ ಅದರಲ್ಲಿ ಅರ್ಧ ಮನೆಯೂ ಆಗಿಲ್ಲ.

7) ರೈತರ ಲಾಭ ದ್ವಿಗುಣಗೊಳಿಸುವುದಾಗಿ ಹೇಳಿದ್ದರು, ಆಗಿದೆಯಾ? .

8) ನೋಟ್ ಬಂಧಿ ಮಾಡಿದ ಸಂಧರ್ಭಗಳಲ್ಲಿ ನೀಡಿದ ಮಾತು ಮರೆತರು.

9) ಅಹಮದಬಾದ್ ನಿಂದ‌ ಮುಂಬೈವರೆಗೆ 2022 ರಲ್ಲಿ ಬುಲೆಟ್ ಟ್ರೇನ್ ಪ್ರಾರಂಭಿಸುವುದಾಗಿ ಹೇಳಿದರು, ಆಯ್ತಾ ?

10) ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಲಾಭ ಆಗಲಿಲ್ಲ.

11) ದೇಶದ ಬ್ಯಾಂಕ್ ಗಳಲ್ಲಿ ಸಾಲ ಮಾಡಿ ಓಡಿ ಹೋದವರನ್ನು ಹಿಡಿದು ತರಲಿಲ್ಲ..

ಇಷ್ಟಾದರೂ ಕೂಡಾ ಯುವಕರು ಮೋದಿಯನ್ನು ಯಾಕೆ ಬೆಂಬಲಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ನಾನು ಹನ್ನೊಂದು ಚುನಾವಣೆ ಗೆದ್ದಿದ್ದೇನೆ ಆದರೆ ಸುಳ್ಳು ಆಡಿಲ್ಲ. ಹಾಗಾಗಿ, ನನ್ನನ್ನು ಜನರು ಆಶೀರ್ವಾದ ಮಾಡಿದ್ದಾರೆ ಎಂದರು.

Related Posts

Leave a Reply

Your email address will not be published. Required fields are marked *