Saturday, February 28, 2026
Menu

ರಾಜಕಾರಣದಲ್ಲಿ ಶಸ್ತ್ರ, ಅಸ್ತ್ರ ಬೇಕಾಗಿಲ್ಲ, ಹಣೆ ಬರಹದಲ್ಲಿ ಬರೆದಿದ್ದರೆ ನನ್ನ ಅಣ್ಣ ಸಿಎಂ ಆಗ್ತಾರೆ: ಡಿಕೆ ಸುರೇಶ್‌

“ಹಣೆ ಬರಹದಲ್ಲಿ ಬರೆದಿದ್ದರೆ ನನ್ನ ಅಣ್ಣ ಸಿಎಂ ಆಗುತ್ತಾರೆ. ಹಣೆಬರಹ ಇಲ್ಲ ಎಂದರೆ ಯಾರೂ ಏನೂ ಮಾಡಲು ಆಗುವುದಿಲ್ಲ,” ಎಂದು ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ ಹೇಳಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು. ನೀವು ಶಸ್ತ್ರತ್ಯಾಗ ಮಾಡಿದ್ದೀರಾ ಎಂದು ಕೇಳಿದಾಗ, “ತ್ಯಾಗ ಮಾಡಲು ಶಸ್ತ್ರ ಇರಬೇಕಲ್ಲವೇ? ಶಸ್ತ್ರವೇ ಇಲ್ಲವಲ್ಲ. ಶಸ್ತ್ರ ಇದೆ ಎಂದು ನಾನು ಯಾವಾಗ ಹೇಳಿದ್ದೆ. ಶಸ್ತ್ರವೇ ಇಲ್ಲದಿದ್ದಾಗ ಶಸ್ತ್ರತ್ಯಾಗದ ಪ್ರಶ್ನೆಯೇ ಬಾರದು” ಎಂದರು.

ತಾಳ್ಮೆಯ ಅಸ್ತ್ರ ಇದೆ ಎಂದಿದ್ದೀರಿ ಎಂದಾಗ, “ಈಗಲೂ ತಾಳ್ಮೆ ಇರಲಿ ಎಂದು ಹೇಳುತ್ತಿದ್ದೇನೆ” ಎಂದು ಪ್ರತಿಕ್ರಿಯೆ ನೀಡಿದರು. ಶಸ್ತ್ರ, ತಂತ್ರ, ಯುದ್ಧ ಇಲ್ಲದೇ ಬಗೆಹರಿಯುವುದೇ ಎಂದಾಗ, “ಇದು ರಾಜಕಾರಣ. ಇಲ್ಲಿ ಶಸ್ತ್ರ ಹಾಗೂ ಅಸ್ತ್ರ ಬೇಕಾಗಿಲ್ಲ” ಎಂದು ಉತ್ತರಿಸಿದರು.

ಶಾಸಕರು ದೆಹಲಿಗೆ ತೆರಳಿ ನಾಯಕತ್ವ ಬದಲಾವಣೆ ವಿಚಾರವಾಗಿ ಹೈಕಮಾಂಡ್ ನಾಯಕರನ್ನು ಕೇಳುವ ಬಗ್ಗೆ ಪ್ರಶ್ನಿಸಿದಾಗ, “ಶಾಸಕರು ದೆಹಲಿಗೆ ಹೋಗುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಶಾಸಕರನ್ನೇ ಕೇಳಿ” ಎಂದರು.

ಭೋಜನಕೂಟ ಸೇರಿದ ಶಾಸಕರು ನಾಯಕತ್ವದ ವಿಚಾರದಲ್ಲಿ ಸ್ಪಷ್ಟನೆ ಕೇಳಿದ್ದಾರೆ ಎಂದಾಗ, “ನಾನು ಊರಲ್ಲಿ ಇರಲಿಲ್ಲ. ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಅವರು ಯಾವ ತೀರ್ಮಾನ ಕೈಗೊಂಡಿದ್ದಾರೆ, ಯಾವ ಹೇಳಿಕೆ ಕೊಟ್ಟಿದ್ದಾರೆ ಎಂಬುದೂ ಗೊತ್ತಿಲ್ಲ. ಇದು ಅವರ ವೈಯಕ್ತಿಕ ವಿಚಾರ. ಪಕ್ಷ ಅದನ್ನು ಗಮನಿಸಲಿದೆ” ಎಂದು  ಹೇಳಿದರು.

ಹೀಗೆ ಆದರೆ 2028ರ ಚುನಾವಣೆ ಪಕ್ಷಕ್ಕೆ ಕಷ್ಟವಾಗಲಿದೆ ಎಂದಾಗ, “ಚುನಾವಣೆಗೆ ಸ್ಪರ್ಧಿಸುವವರಿಗೆ ಕಷ್ಟವಾಗಬಹುದು. ನನಗೆ ಕಷ್ಟ ಆಗುವುದಿಲ್ಲ. ಈ ಬಗ್ಗೆ ನಾನೇಗೆ ಹೇಳಲಿ” ಎಂದು ಮರುಪ್ರಶ್ನಿಸಿದರು.  ಶಾಸಕರ ಆಗ್ರಹದಲ್ಲಿ ನ್ಯಾಯ ಇದೆ ಅಲ್ಲವೇ ಎಂದು ಕೇಳಿದಾಗ, “ಶಾಸಕರ ವಿಚಾರಧಾರೆ ಅವರಿಗೆ  ಸಂಬಂಧಿಸಿದ್ದೇ ಹೊರತು, ನನಗಲ್ಲ. ಪಕ್ಷ ಅವರ ವಿಚಾರಗಳನ್ನು ಗಮನಿಸಲಿದೆ. ನಾವು ಆ ವಿಚಾರದಲ್ಲಿ ಹೇಳಲು ಬರುವುದಿಲ್ಲ” ಎಂದರು.

ಶಿವಕುಮಾರ್ ಅವರು ಪಕ್ಷ ನನ್ನನ್ನು ಗಮನಿಸಲಿದೆ ಎಂದು ಹೇಳುತ್ತಲೇ ಇದ್ದಾರೆ ಎಂದಾಗ, “ಎಲ್ಲದಕ್ಕೂ ತಾಳ್ಮೆ ಇರಲಿ” ಎಂದ ಡಿಕೆ ಸುರೇಶ್‌, ಸಿದ್ದರಾಮಯ್ಯ ಅವರನ್ನು ಬದಲಿಸುವುದಾದರೆ ದಲಿತ ಸಿಎಂ ಮಾಡಬೇಕು ಎಂಬ ಹೆಚ್.ಸಿ ಮಹದೇವಪ್ಪ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಎಲ್ಲರಿಗೂ ಆಸೆ ಇದೆ. ಇದರಲ್ಲಿ ತಪ್ಪೇನಿಲ್ಲ” ಎಂದು ಉತ್ತರಿಸಿದರು.

ನಿಮ್ಮ ಸಹೋದರರನ್ನು ಸಿಎಂ ಹುದ್ದೆಯಲ್ಲಿ ಕೂರಿಸಲು ನಿಮ್ಮ ಪ್ರಯತ್ನ ಹೇಗಿದೆ, ನಿಮ್ಮ ಬಳಿ ಶಾಸಕರ ಸಂಖ್ಯೆ ಹೆಚ್ಚಾಗಿದೆಯೇ ಎಂದು ಕೇಳಿದಾಗ, “ನನಗೆ ಆ ಬಗ್ಗೆ ಗೊತ್ತಿಲ್ಲ. ಶಾಸಕರ ವಿಚಾರ ಬಿಟ್ಟು ಬಮೂಲ್ ವಿಚಾರ ಏನಾದರೂ ಇದ್ದರೆ ಕೇಳಿ, ಪ್ರತಿಕ್ರಿಯೆ ನೀಡುವೆ’ ಎಂದರು.

ಪಕ್ಷದಿಂದ ಕೆಎಂಎಫ್ ಚುನಾವಣೆ ಅಭ್ಯರ್ಥಿ ಆಯ್ಕೆ

ಮಾರ್ಚ್ 6 ರಂದು ಕೆಎಂಎಫ್ ಚುನಾವಣೆ ನಡೆಯಲಿದೆಯೇ ಎಂದು ಕೇಳಿದಾಗ, “ಚುನಾವಣೆ ಯಾವಾಗ ಮಾಡಬೇಕು ಎಂದು ಅಧಿಕಾರಿಗಳು ತೀರ್ಮಾನ ಮಾಡುತ್ತಾರೆ. ಆಗ ಪಕ್ಷ ತೀರ್ಮಾನ ಮಾಡುವ ವ್ಯಕ್ತಿಯೇ ಸ್ಪರ್ಧೆ ಮಾಡಲಿದ್ದಾರೆ” ಎಂದರು.

ನೀವು ಕೆಎಂಎಫ್ ಚುನಾವಣೆ ಆಕಾಂಕ್ಷಿಯೇ ಎಂದಾಗ, “ನಾನು ಯಾವುದಕ್ಕೂ ಆಕಾಂಕ್ಷಿ ಅಲ್ಲ” ಎಂದು ತಿಳಿಸಿದರು. ರಾಜ್ಯಸಭೆಗೆ ಹೋಗುವ ಪ್ರಯತ್ನ ಇದೆಯೇ ಎಂದಾಗ, “ಇಲ್ಲ, ಅದರ ಬಗ್ಗೆ ನನಗೆ ಗೊತ್ತಿಲ್ಲ. ನಾನು ರಾಜಕೀಯ ಪಂಡಿತನಲ್ಲ” ಎಂದು ಪ್ರತ್ಯುತ್ತರಿಸಿದರು.

ನನ್ನ ಪರವಾಗಿ ಯಾರು ದೆಹಲಿಗೆ ಹೋಗುವುದು ಬೇಡ ಎಂದು ಡಿಸಿಎಂ ಅವರು ಹೇಳಿರುವ ಬಗ್ಗೆ ಕೇಳಿದಾಗ, “ನಾನು ಶಿವಕುಮಾರ್ ಅವರನ್ನು ಭೇಟಿ ಮಾಡಿಲ್ಲ. ಹೀಗಾಗಿ ಈ ವಿಚಾರ ನನಗೆ ಗೊತ್ತಿಲ್ಲ” ಎಂದರು.

ಗ್ಯಾರಂಟಿ ಯೋಜನೆಗಳಿಗೆ 1.20 ಲಕ್ಷ ಕೋಟಿ ಖರ್ಚಾಗಿದೆ ಎಂದು ಕೇಳಿದಾಗ, “ಗ್ಯಾರಂಟಿಯು ರಾಜ್ಯದ ಜನತೆಗೆ ಕೊಟ್ಟ ನಮ್ಮ ವಾಗ್ದಾನ. ನಾವು ಅದರಂತೆ ನಡೆಯಬೇಕು. ಪಕ್ಷದ ಅಧ್ಯಕ್ಷರು, ಸಿಎಂ ಸೇರಿದಂತೆ ಚುನಾವಣೆ ಎದುರಿಸಿದ ಎಲ್ಲರೂ ಗ್ಯಾರಂಟಿ ನೀಡುವುದಾಗಿ ಹೇಳಿದ್ದಾರೆ. ಅದನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು” ಎಂದರು.

ಗ್ಯಾರಂಟಿಗಳು ಹೊರೆ ಎಂಬ ಶಿವಕುಮಾರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಹೊರೆಯಾದರೂ ಆಗಲಿ, ಬೇರೆಯಾದರೂ ಆಗಲಿ. ಮಾತು ಕೊಡುವ ಮುನ್ನ ಚಿಂತನೆ ಮಾಡಬೇಕಿತ್ತು. ಮಾತು ಕೊಟ್ಟಾಗಿದೆ. ಅದರಂತೆ ನಡೆಯಬೇಕು. ಐದು ವರ್ಷಗಳ ಕಾಲ ಎಷ್ಟೇ ಕಷ್ಟ ಆದರೂ ಗ್ಯಾರಂಟಿಗಳನ್ನು ರಾಜ್ಯದ ಜನತೆಗೆ ಕೊಡಬೇಕು” ಎಂದು ತಿಳಿಸಿದರು.

ಸಿರಿವಂತರು ಗ್ಯಾರಂಟಿ ಯೋಜನೆ ತೆಗೆದುಕೊಳ್ಳುವುದು ಬೇಡ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ಸಿರಿವಂತರು ಇದನ್ನು ಪಡೆಯುತ್ತಿದ್ದರೆ ಅದು ತಪ್ಪು. ಬಡವರಿಗಾಗಿ ಗ್ಯಾರಂಟಿ ಯೋಜನೆ ತರಲಾಗಿದೆ. ಈ ಯೋಜನೆ ಎಲ್ಲರೂ ಬಳಸುತ್ತಿರುವ ಬಗ್ಗೆ ಕೆಲವರು ಮಾತನಾಡಿರಬಹುದು. ನಾವು ಕೊಟ್ಟಿರುವ ವಾಗ್ದಾನವನ್ನು ಅನುಷ್ಠಾನ ಮಾಡಲಾಗಿದ್ದು, ಇದರಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಹಿಂದೆ ಸರಿದರೆ ಮಾತಿಗೆ ತಪ್ಪಿದಂತೆ ಆಗುತ್ತದೆ” ಎಂದರು.

Related Posts

Leave a Reply

Your email address will not be published. Required fields are marked *