ಚಾಮರಾಜನಗರ: ನಾನು ಜೆಡಿಎಸ್ ನಲ್ಲೇ ಇದ್ದಿದ್ದರೆ ಮುಖ್ಯಮಂತ್ರಿ ಆಗಲು ದೇವೇಗೌಡರು ಮತ್ತು ಅವರ ಮಕ್ಕಳು ನನ್ನನ್ನು ಬಿಡುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಚಾಮರಾಜನಗರದಲ್ಲಿ ಗುರುವಾರ 72ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಉದ್ಘಾಟಿಸಿ, ಮಾಡನಾಡಿದ ಅವರು, ಸಹಕಾರಿ ಚಳವಳಿಯಲ್ಲಿದ್ದ ಜಿ.ಟಿ.ದೇವೇಗೌಡರು ಈಗಲೂ ಜೆಡಿಎಸ್ ನಲ್ಲಿ ಇದ್ದಾರೆ. ಅವರಿಗೆ ಈಗಲೂ ಸೂಕ್ತಮಾನ ಸಿಗುತ್ತಿಲ್ಲ ಎಂದರು.
ಜಿಟಿ ದೇವೇಗೌಡರು ನನ್ನ ಪರವಾಗಿಯೇ ಇದ್ದಾರೆ. ಜಿ.ಟಿ.ದೇವೇಗೌಡರು 2006ರ ವರೆಗೂ ನನ್ನ ಜೊತೆಗೇ ಇದ್ದರು. ಜೆಡಿಎಸ್ ನಿಂದ ನನ್ನನ್ನು ಉಚ್ಚಾಟಿಸಿದ ಮೇಲೆ ಜಿ.ಟಿ.ದೇವೇಗೌಡರು ಅಲ್ಲೇ ಉಳಿದು ಬಿಟ್ಟರು. ಈಗ ಮತ್ತೆ ಒಂದು ರೀತಿಯಲ್ಲಿ ನಮ್ಮ ಜೊತೆಗೇ ಇದ್ದಾರೆ ಎಂದು ಅವರು ಹೇಳಿದರು.
ನಾನು ಮುಖ್ಯಮಂತ್ರಿ ಆದಾಗಿನಿಂದ ಎಲ್ಲಾ ಜಾತಿ, ಎಲ್ಲಾ ಧರ್ಮದ ಜನರ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡುತ್ತಿದ್ದೇವೆ. ಚಾಮರಾಜನಗರ ಜಿಲ್ಲೆಯ ಎಲ್ಲಾ ಜಾತಿಯ, ಎಲ್ಲಾ ಧರ್ಮದವರೂ ನನಗೆ ಸಹಕಾರ ಕೊಟ್ಟಿದ್ದಾರೆ. ಹೀಗಾಗಿ ಚಾಮರಾಜನಗರ ಜಿಲ್ಲೆಯನ್ನು ನಾನು ಯಾವತ್ತೂ ಮರೆಯುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಚಾಮರಾಜನಗರಕ್ಕೆ ಅನೇಕ ಸಾರಿ ಬಂದಿದ್ದೀನಿ. ಈ ಜಿಲ್ಲೆಗೆ ಬಂದ್ರೆ ಮಂತ್ರಿ ಸ್ಥಾನ ಹೋಗ್ತದೆ ಅನ್ನೋ ಕೆಟ್ಟ ಮೌಡ್ಯ ಇದೆ. ಆದರೆ ಇಲ್ಲಿಗೆ ಬಂದು ಹೋದಷ್ಟೂ ನನ್ನ ಸ್ಥಾನ ಮಾತ್ರವಲ್ಲ, ನಮ್ಮ ಪಕ್ಷದ ಅಧಿಕಾರವೂ ಮತ್ತೆ ಮತ್ತೆ ಗಟ್ಟಿ ಆಗಿದೆ ಎಂದು ಅವರು ನುಡಿದರು.


