ದೇಶದ ಓರ್ವ ಪ್ರಜೆಯ ಖಾಸಗಿ ಸ್ವತ್ತು, ಮತ್ತೋರ್ವ ವ್ಯಕ್ತಿಯಿಂದ ಒತ್ತುವರಿಯಾಗುವ ಸಮಯದಲ್ಲಿ ತಲೆಯೆತ್ತುವ ಪ್ರಿನ್ಸಿಪಲ್ ಆಫ್ ನ್ಯಾಚುರಲ್ ಜಸ್ಟೀಸ್ ಸೂತ್ರವನ್ನು ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡು ಅಲ್ಲಿ ಠಿಕಾಣಿ ಹಾಕಿದವನಿಗೆ ಹೇಗೆ ಅನ್ವಯಿಸಲಾದೀತು? ಸಂವಿಧಾನದ ಅನುಚ್ಚೇದ ೨೧ರಲ್ಲಿ ಪರ್ಸನಲ್ ಲಿಬರಿಟಿ ಉಲ್ಲೇಖವಾಗಿದ್ದರೂ, ಸರ್ಕಾರಿ ಭೂ ಒತ್ತುವರಿದಾರರಿಗೆ ಇದರಡಿ ಕಾನೂನಿನ ರಕ್ಷಣೆ ನೀಡಲು ಸಾಧ್ಯವೇ?
ಭೂ ಒತ್ತುವರಿ ಮತ್ತು ಸಾಮಾಜಿಕ ನ್ಯಾಯ-ದೇಶದಲ್ಲಿ ಸಂವಿಧಾನ ಜಾರಿಗೆ ಬಂದ ದಿನದಿಂದಲೂ ಎದುರಾಗಿರುವ ತೊಡಕು. ಸರ್ಕಾರಿ ಜಮೀನುಗಳನ್ನು ಸಕಾಲದಲ್ಲಿ ಗುರುತಿಸಿ ಅವುಗಳನ್ನು ಸಂರಕ್ಷಿಸುವ ಹೊಣೆಗಾರಿಕೆ ಜಿಲ್ಲಾಡಳಿತದ್ದು. ದೇಶದ ಎಷ್ಟು ಮಂದಿ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಮತ್ತು ತಹಸೀಲ್‌ದಾರರಿಗೆ ತಮ್ಮ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಮೀನುಗಳ ಚೆಕ್ಕುಬಂದಿ ಗೊತ್ತಿರುತ್ತದೆ? ಅಕ್ರಮ ನಿವಾಸ ಮತ್ತು ಒತ್ತುವರಿ ನಿಗ್ರಹಿಸಲು ಮುನ್ನೆಚ್ಚರಿಕೆ ಕ್ರಮ ಅಗತ್ಯ. ಇದರ ಸಲುವಾಗಿಯೇ ದೇಶದ ಸಂವಿಧಾನದಲ್ಲಿ ಕಾರ್ಯಾಂಗದ ಕರ್ತವ್ಯಗಳನ್ನು ಉಲ್ಲೇಖಿಸಿರುವುದು. ಒಟ್ಟಿನಲ್ಲಿ ಸರ್ಕಾರಿ ಜಮೀನು ರಕ್ಷಣೆಯ ಸಂಪೂರ್ಣ ಹೊಣೆಗಾರಿಕೆ ಅಧಿಕಾರಿಗಳದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ.
ಬೆಂಗಳೂರು ಅಂತಹ ಶರವೇಗದ ಬೆಳವಣಿಗೆಯುಳ್ಳ ಮಹಾನಗರಕ್ಕೆ ಸಾವಿರಾರು ಮಂದಿ, ಬೇರೆ ಬೇರೆ ಕಡೆಯಿಂದ ಬಂದು ನೆಲೆಸುತ್ತಿರುವುದುಂಟು. ರಾಜ್ಯದ ಮೂಲೆ ಮೂಲೆಯಿಂದಲ್ಲದೆ ದೇಶದ ವಿವಿಧ ರಾಜ್ಯಗಳಿಂದಲೂ ಇಲ್ಲಿಗೆ ತಂಡೋಪ ತಂಡ ವಾಗಿ ಬಂದು ವಾಸಿಸುತ್ತಿರುವುದು ಸಾಮಾನ್ಯವಾಗಿದೆ. ಕೂಲಿ ಹೆಸರಿನಲ್ಲಿ ಬೇರೆ ರಾಜ್ಯಗಳಿಂದ ಬಂದು ಇಲ್ಲಿ ನೆಲೆಸುವ ಕಾರ್ಮಿಕರ ಮೇಲೆ ಇಲಾಖೆ ಸಂಪೂರ್ಣ ನಿಗಾ ಇಡಬೇಕು ಮತ್ತು ವಲಸೆ ಕಾರ್ಮಿಕರೆಂದು ಗುರುತಿಸಿ ಅವರಿಗೆ ಗುರುತಿನ ಚೀಟಿ ಕೊಡಬೇಕು. ಅವರು ವಾಸಿಸುವ ಜಾಗಗಳ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ನಿಗಾಯಿಟ್ಟಿರಬೇಕು. ಈ ಕೆಲಸಗಳೆಲ್ಲವೂ ಅಧಿಕಾರಿಗಳಿಂದ ಸರಿಯಾಗಿ ಮತ್ತು ಸಮರ್ಪಕವಾಗಿ ನಿರ್ವಹಣೆ ಆದರೆ ಸರ್ಕಾರಿ ಜಮೀನುಗಳೇಕೆ ವಲಸಿಗರ ನಿವಾಸಿ ದಾಣಗಳಾಗಿ ಪರಿಣಮಿಸುತ್ತೆ?
ಕಾನೂನು ಪ್ರಕಾರ ತಮ್ಮ ಕರ್ತವ್ಯ ನಿಭಾಸಬೇಕಿರುವ ಅಧಿಕಾರಿಗಳ ಪರಮ ನಿರ್ಲಕ್ಷ್ಯ ಮತ್ತು ರಾಜಕೀಯ ಪ್ರತಿನಿಧಿಗಳ ಜಾಣಕುರುಡುತನದಿಂದ ಇಂದು ಬೆಂಗಳೂರು ಅಂತಹ ಮಹಾನಗರದಲ್ಲಿ ಸರ್ಕಾರಿ ಜಮೀನಿನ ಒತ್ತವರಿ ಸಮಸ್ಯೆಗಳು ಬೆಟ್ಟ ದಷ್ಟು ಬೆಳೆದಿದೆ. ಒತ್ತುವರಿದಾರರು ಕೇರಳದವರಾಗಿರಲಿ, ಗುಜರಾತಿನವರಾಗಿರಲಿ ಕಾನೂನಿನಡಿ ಒತ್ತುವರಿ ತೆರವುಗೊಳಿಸುವ ಸಮಯದಲ್ಲಿ ಒತ್ತುವರಿದಾರರಿಗೆ ಸರ್ಕಾರ ಕಡ್ಡಾಯವಾಗಿ ಪರಿಹಾರ ನೀಡಲೇಬೇಕೆಂಬ ನಿಯಮಾವಳಿಯಿಲ್ಲ. ಕೇರಳದ ಸಿಎಂ ಪಿಣರಾಯಿ ವಿಜಯನ್ ಮಾಡುವ ಬುಲ್‌ಡೋಜರ್ ನ್ಯಾಯವನ್ನಿಲ್ಲಿ ದೇಶದ ಸಂವಿಧಾನವೂ ಒಪ್ಪದು.
ದೇಶದ ಓರ್ವ ಪ್ರಜೆಯ ಖಾಸಗಿ ಸ್ವತ್ತು, ಮತ್ತೋರ್ವ ವ್ಯಕ್ತಿಯಿಂದ ಒತ್ತುವರಿಯಾಗುವ ಸಮಯದಲ್ಲಿ ತಲೆಯೆತ್ತುವ ಪ್ರಿನ್ಸಿಪಲ್ ಆಫ್ ನ್ಯಾಚು ರಲ್ ಜಸ್ಟಿಸ್ ಸೂತ್ರವನ್ನು ಸರ್ಕಾರಿ ಜಮೀನಿನಲ್ಲಿ ಓರ್ವ ವ್ಯಕ್ತಿ ಒತ್ತುವರಿ ಮಾಡಿಕೊಂಡು ಠಿಕಾಣಿ ಹಾಕಿದವನಿಗೆ ಇದೇ ಸೂತ್ರವನ್ನು ಸಮೀಕರಿಸಲು ಸಾಧ್ಯವಿಲ್ಲ. ಸಂವಿಧಾನದ ಅನುಚ್ಚೇದ ೨೧ರಲ್ಲಿ ಪರ್ಸನಲ್ ಲಿಬರಿಟಿ ಉಲ್ಲೇಖವಾದರೂ, ಇದರಡಿ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡವರಿಗೆ ಕಾನೂನಿನ ರಕ್ಷಣೆ ನೀಡಲು ಸಾಧ್ಯವೇ ? ಒತ್ತುವರಿದಾರರನ್ನು ಕಾನೂನಿನಡಿ ಸಂತ್ರಸ್ತರೆಂದು ಪರಿಗಣಿಸುವುದಾದರೂ ಹೇಗೆ ? ಕಾನೂನುಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದಲ್ಲಿ ಈ ದೇಶದಲ್ಲಿ ಸಮಸ್ಯೆಗಳೂ ಕಡಿಮೆಯಾದೀತು . ಆದರೆ ರಾಜಕೀಯ ಹಿತಾಸಕ್ತಿಗಳಿಗೆ ಅನುಗುಣವಾಗಿ ಕಾನೂನು ದುರ್ಬಳಕೆಯಾದಲ್ಲಿ ದೇಶದ ಸಂವಿಧಾನ ಮತ್ತು ಕಾನೂನು ಎಂಬುದು ಬಿಳಿ ಹಾಳೆಯ ಮೇಲೆ ಬರೀ ಕಪ್ಪು ಅಕ್ಷರಗಳು ಮಾತ್ರವೇ ಹೌದು.


