SCCP/ TSP ಅನುದಾನ ಡೈವೋರ್ಟ್ ಆಗಿದ್ದರೆ ಆ ಬಗ್ಗೆ ಬಿಜೆಪಿ ದಾಖಲೆ ನೀಡಲಿ. ಹಾಗೆ ಆಗಿದ್ದರೆ ಕ್ರಮ ಜರುಗಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.
ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡುತ್ತಿದ್ದರು. ಬಿಜೆಪಿ ನಾಯಕರು ಸುಮ್ಮನೆ ಆರೋಪ ಮಾಡುವುದು ಬಿಟ್ಟು ಜನರಿಗೆ ದಾರಿ ತಪ್ಪಿಸುವುದನ್ನು ಬಿಟ್ಟು ಸರ್ಕಾರಕ್ಕೆ ದಾಖಲೆ ಒದಗಿಸಲಿ. ಬಿಜೆಪಿ ಕಾಲದಲ್ಲಿ ಎಸ್ ಸಿಸಿ ಪಿ / ಟಿಎಸ್ ಪಿ ಅನುದಾನ ಡೈವರ್ಟ್ ಆಗಿತ್ತು. ಅದನ್ನು ಅಂದಿನ ಸಿಎಂ ಬೊಮ್ಮಾಯಿ ಒಪ್ಪಿಕೊಂಡಿದ್ದರು. ಈಗ ಅದೇ ಬಿಜೆಪಿ ನಾಯಕರು ತಪ್ಪು ಮಾಹಿತಿ ಕೊಡುತ್ತಿದ್ದಾರೆ. ಬಿಜೆಪಿಯವರ ಆರೋಪಗಳಿಗೆ ಸದನದಲ್ಲೇ ಉತ್ತರ ನೀಡಲಾಗಿದೆ ಎಂದರು.
ದಲಿತರ ಬಗ್ಗೆ ಆದಿವಾಸಿಗಳ ಬಗ್ಗೆ ನಿಜವಾದ ಕಾಳಜಿ ಇದ್ದರೆ ಬಿಜೆಪಿ ನಾಯಕರು ಕೇಂದ್ರದಿಂದ ಅನುದಾನ ತರಿಸಿಕೊಡಲಿ ಎಂದು ಸವಾಲು ಹಾಕಿದ ಸಚಿವರು ಬಿಜೆಪಿ ಆಡಳಿತವಿರುವ ರಾಜ್ಯದಲ್ಲಾದರೂ ಅನುದಾನ ಒದಗಿಸಲಿ. ವಿರೋಧ ಪಕ್ಷದ ಶಾಸಕರಿಗೆ ಅನುದಾನ ಕೊರತೆಯಾಗಿದೆ ಎಂದು ಹೇಳಲಾದ ಆರೋಪಕ್ಕೆ ಉತ್ತರಿಸಿದ ಸಚಿವರು, ಎಲ್ಲಾ ಶಾಸಕರು ತಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನಿರೀಕ್ಷೆ ಮಾಡುವುದು ತಪ್ಪಲ್ಲ. ಅಂದು ಬಿಜೆಪಿ ಸರ್ಕಾರ ಇದ್ದಾಗಲೂ ಕೂಡಾ ನಮಗೆ ಅನುದಾನ ಬಿಡುಗಡೆ ಮಾಡುವಲ್ಲಿ ತಾರತಮ್ಯ ಎಸಗಲಾಗಿತ್ತು. ಈ ಬಗ್ಗೆ ನಾನು ಹಲವಾರು ಬಾರಿ ಹೇಳಿದ್ದೇನೆ ಎಂದು ಹೇಳಿದರು. ಕಲಬುರಗಿಯಲ್ಲಿ ನಡೆದ ಕ್ಯಾಬಿನೆಟ್ನಲ್ಲಿ ಕೈಗೊಂಡ ನಿರ್ಣಯಗಳ ಜಾರಿ ಬಗ್ಗೆ ಸದ್ಯದಲ್ಲೇ ಸಮಗ್ರ ಮಾಹಿತಿ ನೀಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಒಂದುವರೆ ತಿಂಗಳ ಹಿಂದೆ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿದ ಕೃಷಿ ಸಚಿವ ಚೆಲುವರಾಯಸ್ವಾಮಿ ಯೂರಿಯಾ ಗೊಬ್ಬರ ಸರಬರಾಜಿಗೆ ಆದ್ಯತೆ ನೀಡುವಂತೆ ಮನವಿ ಸಲ್ಲಿಸಿದ್ದರು. ಈ ಸಲ ನಮಗೆ ಅಗತ್ಯವಿರುವ ಗೊಬ್ಬರ ಸರಬರಾಜು ಮಾಡಿಲ್ಲ. ರಾಜ್ಯದ ಒಪನಿಂಗ್ ಬ್ಯಾಲೆನ್ಸ ಅನ್ನು ಬೇಡಿಕೆಯಲ್ಲಿ ಕಡಿತಗೊಳಿಸಿದ ಕೇಂದ್ರ ಸರ್ಕಾರ ಉಳಿದ ರಸಗೊಬ್ಬರ ಸರಬರಾಜು ಮಾಡಿದೆ. ಈ ಹಿಂದೆ ರಾಜ್ಯದ ಒಪನಿಂಗ್ ಬ್ಯಾಲೆನ್ಸ್ ಅನ್ನು ಪರಿಗಣಿಸುತ್ತಿರಲಿಲ್ಲ. ಕಲಬುರಗಿ ಜಿಲ್ಲೆಯಲ್ಲಿ ಈ ಸಲ 100% ಬಿತ್ತನೆಯಾಗಿದೆ. 500 ಟನ್ ಗೊಬ್ಬರ ಬೇಡಿಕೆ ಇದ್ದು, 200 ಟನ್ ಗೊಬ್ಬರವನ್ನು ಬಾಗಲಕೋಟೆಯಿಂದ ತರಿಸಲಾಗುತ್ತಿದೆ. ಉಳಿದ 300 ಟನ್ ರಸಗೊಬ್ಬರವನ್ನು ಆದಷ್ಟು ಬೇಗ ತರಿಸಲಾಗುವುದು. ರಸಗೊಬ್ಬರ ವಿಚಾರದಲ್ಲಿ ಇಲ್ಲಿ ಪ್ರತಿಭಟನೆ ಮಾಡುವ ಬದಲು ಬಿಜೆಪಿಗರು ದಿಲ್ಲಿಯಲ್ಲಿ ಪ್ರತಿಭಟನೆ ಮಾಡಿ ರಾಜ್ಯಕ್ಕೆ ಗೊಬ್ಬರ ತರಿಸಿಕೊಡಲಿ ಎಂದು ಸಲಹೆ ನೀಡಿದರು.
ಸಿಎಂ ಗಾದಿ ತಪ್ಪಿದ್ದಕ್ಕೆ ರಿಗ್ರೇಟ್ ಇಲ್ಲ
ರಾಜ್ಯ ಸಭಾ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ತಮಗೆ ಸಿಎಂ ಪದವಿ ಸಿಗದಿರುವ ಬಗ್ಗೆ ಹೇಳಿದ್ದಾರೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಂಪೂರ್ಣ ವಿವೀಡಿಯೊ ನೋಡಿದಾಗ ಮಾತ್ರ ಅವರ ಮಾತಿನ ಅರ್ಥ ಆಗುತ್ತದೆ. ಪಕ್ಷಕ್ಕಾಗಿ ಅವರು ದುಡಿದಿದ್ದಾರೆ. ಇಲ್ಲಿಂದ ದಿಲ್ಲಿಯವರೆಗೆ ಅವರು ಮುಟ್ಟಿದ್ದಾರೆ. ಸಿಎಂ ಪದವಿ ತಪ್ಪಿರುವ ಬಗ್ಗೆ ಅವರಿಗೆ ಯಾವುದೇ ರಿಗ್ರೆಟ್ ಇಲ್ಲ. ಅವರ ಮುಂದಿನ ರಾಜಕೀಯ ಜೀವನದ ನಿರ್ಧಾರಗಳನ್ನು ಅವರು ತೆಗೆದುಕೊಳ್ಳುತ್ತಾರೆ. ಅವರ ನಿರ್ಧಾರವನ್ನು ಸೋನಿಯಾಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಕೂಡಾ ಗೌರವಿಸುತ್ತಾರೆ ಎಂದರು.
ರಂದೀಪ್ ಸುರ್ಜೆವಾಲ ಅವರು ಸಚಿವರ ಸಭೆ ಕರೆದಿರುವುದಕ್ಕೆ ಬಿ.ಎಲ್. ಸಂತೋಷ ಆಕ್ಷೇಪ ವ್ಯಕ್ತಪಡಿಸಿರುವುದರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಸುರ್ಜೆವಾಲ ಬದಲಿಗೆ ದತ್ತಾತ್ರೇಯ ಹೊಸಬಾಳೆ ಅಥವಾ ಸಂತೋಷ್ ಸಭೆ ತೆಗೆದುಕೊಳ್ಳಬೇಕೇ ? ಎಂದು ಪ್ರಶ್ನಿಸಿದರು.
ಮನ್ಕೀ ಬಾತ್ ಕೇಳಿ ಸಾಕಾಗಿದೆ. ಏನಾದರೂ ಕೊಡುಗೆ ಕೊಟ್ಟು ಮೋದಿ ಮಾತನಾಡಲಿ. ಈ ಹಿಂದೆ ಕಲಬುರಗಿ ರೊಟ್ಟಿ ಬಗ್ಗೆ ಮಾತನಾಡಿದ್ದರು ಏನಾದರೂ ಕೊಡುಗೆ ಕೊಟ್ಟಿದ್ದಾರೆಯೇ, ಈಗ ಕೋಟೆ ಬಗ್ಗೆ ಮಾತನಾಡಿದ್ದಾರೆ ಮುಂದೆ ದಿನ ಮತ್ತೊಂದು ವಿಷಯದ ಬಗ್ಗೆ ಮಾತನಾಡುತ್ತಾರೆ. ಕೊಡುಗೆ ನೀಡಿ ಆಮೇಲೆ ಮಾತನಾಡಲಿ ಎಂದು ಕುಟುಕಿದರು.
ಕೇಂದ್ರಿಯ ವಿಶ್ವವಿದ್ಯಾಲಯ ಗಳು ಆರ್ ಎಸ್ ಎಸ್ ಶಾಖೆಗಳಾಂತಾಗಿವೆ ಎಂದು ಆರೋಪಿಸಿದ ಖರ್ಗೆ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗೆ ಸಂಬಂದಿಸಿದ ಕಾರ್ಯಕ್ರಮ ನಡೆಸಲು ನಮಗೆ ಅನುಮತಿ ನಿರಾಕರಿಸಲಾಗಿದೆ. ಖರ್ಗೆ ಸಾಹೇಬರು ಈ ಭಾಗಕ್ಕೆ ಅನುಕೂಲ ಆಗಲಿ ಎಂದು ಜಿಲ್ಲೆಗೆ ಕೇಂದ್ರೀಯ ವಿವಿ ತಂದರು. ಆದರೆ, ಅದು ಆರ್ ಎಸ್ ಎಸ್ ಶಾಖೆ ಮಾಡಲು ಅನುಕೂಲ ಮಾಡಿಕೊಟ್ಟಂತಾಗಿದೆ ಎಂದು ಟೀಕಿಸಿದರು.
ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಅಯೋಗ್ಯ ಪದ ಬಳಸಿದ್ದಕ್ಕೆ ಚಕ್ರವರ್ತಿ ಸೂಲಿಬೆಲೆ ಅವರ ಮೇಲೆ ದಾಖಲಾದ ಎಫ್ ಐ ಆರ್ ಅನ್ನು ಸುಪ್ರೀಂ ಕೊರ್ಟ್ ರದ್ದು ಮಾಡಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಾಡಿಗೆ ಭಾಷಣಕಾರರ ಬಗ್ಗೆಯಾಗಲೀ, ಅವರ ಬಾಸ್ ಗಳ ಬಗ್ಗೆಯಾಗಲೀ ನಾನೇನು ಉತ್ತರಿಸಲಿ ? ನಾನು ಯಾವುದಾದರೂ ಎಫ್ ಐ ಆರ್ ಹಾಕಿದ್ದರೆ ತೋರಿಸಲಿ. ಯಾರೋ ಒಬ್ಬರು ಅಲ್ಲಿನ ಸ್ಥಳೀಯ ನಾಯಕರು ಹಾಕಿದ್ದರೆ ಅದಕ್ಕೆ ನಾನೇನು ಹೇಳಲಿ ಎಂದು ಮಾರುತ್ತರ ನೀಡಿದರು.
ತಮ್ಮ ಬಗ್ಗೆ ಬಿಜೆಪಿ ನಾಯಕರು ಅವಹೇಳನಕಾರಿ ಟೀಕೆ ಮಾಡಿದ್ದನ್ನು ಪ್ರಸ್ತಾಪಿಸಿದ ಖರ್ಗೆ, ನನ್ನ ಬಗ್ಗೆ ಸದನದಲ್ಲೇ ಬಿಜೆಪಿಯವರು ಅವಹೇಳನ ರೀತಿಯಲ್ಲಿ ಮಾತನಾಡಿದ್ದಾರೆ. ನನ್ನ ಬಗ್ಗೆ ಪ್ರಸ್ತಾಪ ಮಾಡಲಿಲ್ಲ ಅಂದರೆ ಅವರಿಗೆ ಆರ್ ಎಸ್ ಎಸ್ ನಲ್ಲಿ ಬೆಲೆ ಇರುವುದಿಲ್ಲ, ಅವರಿಗೆ ಮುಂಬಡ್ತಿ ಸಿಗುವುದಿಲ್ಲ. ಬಿಜೆಪಿ ನಾಯಕರು ಬಹಿರಂಗ ವೇದಿಕೆಗೆ ಬರಲಿ ನಾನೊಬ್ಬನೇ ಸಾಕು ಅವರು ಏನೇನೂ ಹೇಳಿದ್ದಾರೆ ಎಲ್ಲಾ ವಿವರವಾಗಿ ಹೇಳುತ್ತೇನೆ ಎಂದು ಸವಾಲ್ ಹಾಕಿದರು.
ಮೋದಿ ಅವರು ಹೆಚ್ಚಿನ ಅವಧಿಯಲ್ಲಿ ಪ್ರಧಾನಿಯಾಗುವ ಮೂಲಕ ಇಂದಿರಾಗಾಂಧಿ ಅವರ ದಾಖಲೆ ಮುರಿದಿದ್ದಾರೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದರ ಸಚಿವರು, ಇಂದಿರಾಗಾಂಧಿ ಮಾಡಿದ ಕೆಲಸದಲ್ಲಿ ಅರ್ಧದಷ್ಟಾದರೂ ಕೆಲಸವನ್ನು ಮೋದಿ ಮಾಡಿ ತೋರಿಸಲಿ. ಇಂದಿರಾಗಾಂಧಿ ಬ್ಯಾಂಕ್ ಗಳ ರಾಷ್ಟ್ರೀಕರಣ, ಭೂಮಿ ಉಳುಮೆಗೆ ತಂದ ಸುಧಾರಣೆ ಹಾಗೂ ಪಾಕಿಸ್ತಾನವನ್ನು ಎರಡು ಭಾಗ ಮಾಡಿದ್ದು ಸೇರಿದಂತೆ ಹಲವಾರು ಕ್ರಾಂತಿಕಾರಿ ಬದಲಾವಣೆ ಮಾಡಿದ್ದಾರೆ. ಇಂದಿರಾಗಾಂಧಿ ಅವರು 44 ಬಾರಿ ಪತ್ರಿಕಾಗೋಷ್ಠಿ ಮಾಡಿದ್ದಾರೆ ಇವರೇನು ಮಾಡಿದ್ದಾರೆ? ಮೊನ್ನೆ ರಾಹುಲ್ ಗಾಂಧಿ ಹೇಳಿದಂತೆ ಮೋದಿಯವರ ಬಗ್ಗೆ ಕೆಲವು ಮೀಡಿಯಾಗಳು ಹೈಪ್ ಮಾಡುತ್ತಿದ್ದಾರೆ ಅಷ್ಟೇ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಪಕ್ಷ ಚುನಾವಣೆ ಆಯೋಗವನ್ನು ತಮ್ಮ ಕೈಗೊಂಬೆಯನ್ನಾಗಿ ಮಾಡಿಕೊಂಡಿದೆ ಎಂದು ಆರೋಪಿಸಿದ ಖರ್ಗೆ, ಕರ್ನಾಟಕದಲ್ಲಿ ಚುನಾವಣೆಯಲ್ಲಿ ಭ್ರಷ್ಟಾಚಾರ ನಡೆದಿದೆ ಹಾಗೆ ಮಹಾರಾಷ್ಟ್ರದ ಲ್ಲಿಯೂ ಆಗಿದೆ. ಈ ಬಗ್ಗೆ ರಾಹುಲ್ ಗಾಂಧಿ ಈಗಾಗಲೇ ಹೇಳಿದ್ದಾರೆ. ಇಂದಿನಿಂದ ಸಿಂದೂರ ಬಗ್ಗೆ ಚರ್ಚೆ ಆಗುತ್ತದೆ. ನಂತರ ಚುನಾವಣೆ ಅಕ್ರಮದ ಬಗ್ಗೆ ಎಲ್ಲವೂ ದಾಖಲೆ ಸಮೇತ ಮಾತನಾಡುತ್ತೇವೆ ಎಂದರು.