ಬಿಜೆಪಿಯವರು ಕೇಂದ್ರದಿಂದ ಇಂಧನದ ಬೆಲೆ ಕಡಿಮೆ ಮಾಡಿಸಿದರೆ ನಾವು ಬಸ್ ಟಿಕೆಟ್ ದರ ಇಳಿಸುತ್ತೇವೆ, ರಾಜ್ಯದಲ್ಲಿ ಕಾಲಕಾಲಕ್ಕೆ ಬಸ್ ಟಿಕೆಟ್ ದರ ಪರಿಷ್ಕರಣೆ ಮಾಡುವುದು ವಾಡಿಕೆ. ವಿನಾಕಾರಣ ಬಿಜೆಪಿಯವರು ಟೀಕೆ ಮಾಡುತ್ತಿದ್ದಾರೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದ್ದಾರೆ.
ರಾಜ್ಯದಲ್ಲಿ 132 ಸ್ಥಾನ ಪಡೆದುಕೊಂಡು ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿ ಸಹಿಸಿಕೊಳ್ಳಲಾಗುತ್ತಿಲ್ಲ. ರಾಜ್ಯದ ಮೂರು ಕೋಟಿ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಲು ಶಕ್ತಿ ಯೋಜನೆ ಕಲ್ಪಿಸಿದ್ದು, ಬಸ್ ಪ್ರಯಾಣ ದರ ಏರಿಕೆ ಮಾಡುತ್ತಿರುವುದನ್ನು ಬಿಜೆಪಿಯವರು ವಿರೋಧಿಸುತ್ತಿದ್ದಾರೆ. ಕೇಂದ್ರ ಸರ್ಕಾರಕ್ಕೆ ಹೇಳಿ ಬಿಜೆಪಿಯವರು ಇಂಧನ ಬೆಲೆ ಕಡಿಮೆ ಮಾಡಿಸಿದರೆ ನಾವು ರಾಜ್ಯದಲ್ಲಿ ಬಸ್ ಪ್ರಯಾಣ ದರ ಇಳಿಕೆ ಮಾಡಲು ಸಾಧ್ಯ. ಮೊದಲು ಬಿಜೆಪಿಯವರು ಅದನ್ನು ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಹೊಸ ವರ್ಷದ ಹಿನ್ನೆಲೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ನಡೆದ ಔತಣಕೂಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ. ವಿನಾಕಾರಣ ಸಿಎಂ ಬದಲಾವಣೆ ಚರ್ಚೆ ಎಂದು ಬಿಂಬಿಸಲು ಹೊರಟಿರುವುದು ಸರಿಯಲ್ಲ. ರಾಜ್ಯದಲ್ಲಿಸಿಎಂ ಬದಲಾವಣೆಯ ಚರ್ಚೆ ಎಲ್ಲೂ ನಡೆದಿಲ್ಲ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದ್ದಾರೆ.