ಇನ್ನು ಮುಂದೆ ಬಿಎಂಟಿಸಿ ನೌಕರರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡರೆ ಅವರ ಕುಟುಂಬಕ್ಕೆ 1.50 ಕೋಟಿ ರೂ. ಪರಿಹಾರ ಲಭಿಸಲಿದೆ. ಕೆಎಸ್ಆರ್ಟಿಸಿ ನೌಕರರು ಅಪಘಾತದಲ್ಲಿ ಮೃತಪಟ್ಟರೆ ಅವರ ಕುಟುಂಬದವರಿಗೆ 1 ಕೋಟಿ ರೂ. ಪರಿಹಾರ ನೀಡಲಾಗುತ್ತಿತ್ತು. ಬಿಎಂಟಿಸಿಯ ನೌಕರರು ಆಕ್ಸಿಡೆಂಟ್ನಲ್ಲಿ ಪ್ರಾಣ ಕಳೆದುಕೊಂಡರೆ 50 ಲಕ್ಷ ರೂ. ಮಾತ್ರ ಪರಿಹಾರ ನೀಡಲಾಗುತ್ತಿತ್ತು. ಇನು ಮುಂದೆ ಬಿಎಂಟಿಸಿ ನೌಕರರಿಗೂ 1.50 ಕೋಟಿ ರೂ. ಅಪಘಾತ ವಿಮೆ ನೀಡಲು ಸಂಸ್ಥೆ ತೀರ್ಮಾನಿಸಿದೆ.
ಈ ಬಗ್ಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ದೇಶದಲ್ಲಿ ಯಾವುದೇ ಸರಕಾರಿ ನೌಕರರಿಗೂ ಈ ಸೌಲಭ್ಯವಿಲ್ಲ, ಸೇನೆಯಲ್ಲಿ ಸೇವೆ ಸಲ್ಲಿಸುವ ಯೋಧರು ಪ್ರಾಣ ಕಳೆದುಕೊಂಡರೂ 60 ಲಕ್ಷ ರೂಪಾಯಿ ನೀಡಲಾಗುತ್ತದೆ. ಬಿಎಂಟಿಸಿ ನೌಕರರು ಅಪಘಾತದಲ್ಲಿ ಮೃತಪಟ್ಟರೆ ಒಂದೂವರೆ ಕೋಟಿ ರೂ. ಪರಿಹಾರ ನೀಡಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದಾರೆ.
ಬಿಎಂಟಿಸಿಯ 28 ಸಾವಿರ ನೌಕರರ ಕುಟುಂಬಗಳಿಗೆ ಈ ವಿಮಾ ಸೌಲಭ್ಯ ದೊರೆಯಲಿದೆ. ಬಿಎಂಟಿಸಿಯ ನೌಕರರು ಕರ್ತವ್ಯದಲ್ಲಿರುವಾಗ ಮತ್ತು ಕರ್ತವ್ಯದಲ್ಲಿಲ್ಲ ದಿದ್ದಾಗಲೂ ಸಂಭವಿಸುವ ಅಪಘಾತಕ್ಕೂ 1 ಕೋಟಿ 50 ಲಕ್ಷ ರೂ. ಪರಿಹಾರ ಸಿಗುತ್ತದೆ. ಬಿಎಂಟಿಸಿ ಸಿಬ್ಬಂದಿ ಸಹಜವಾಗಿ ಮೃತಪಟ್ಟರೆ 10 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಈ ಹಿಂದೆ ಮೂರು ಲಕ್ಷ ರುಪಾಯಿ ಪರಿಹಾರ ನೀಡಲಾಗುತ್ತಿತ್ತು. ಈ ಬಗ್ಗೆ ಮಾತನಾಡಿದ ಸಾರಿಗೆ ನೌಕರರ ಮುಖಂಡ ಜಗದೀಶ್, ಕೆಎಸ್ಆರ್ಟಿಸಿಯಲ್ಲಿ ಮಾತ್ರ ಈ ವಿಮಾ ಸೌಲಭ್ಯವಿತ್ತು. ಬಿಎಂಟಿಸಿ ನೌಕರರಿಗೂ ಈ ಸೌಲಭ್ಯ ನೀಡಲು ಒತ್ತಾಯ ಮಾಡಿದ್ದೆವು. ಇದಕ್ಕೆ ಸರ್ಕಾರ ಒಪ್ಪಿಕೊಂಡಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.