ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸಂತ್ರಸ್ತರ ಹೆಸರು, ವಿಳಾಸ ಅಥವಾ ಅವರ ಗುರುತನ್ನು ಯಾವುದೇ ಹಂತದಲ್ಲಿ ಬಹಿರಂಗಪಡಿಸಬಾರದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂಎ ಸಲೀಂ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ಆದೇಶ ಹಾಗೂ ಇಲಾಖೆಯ ಸ್ಥಾಯಿ ಆದೇಶ ಸಂಖ್ಯೆ 1024ರ ಅಡಿ ಸಂತ್ರಸ್ತರ ಗೌಪ್ಯತೆ ಕಾಪಾಡುವುದು ಕಡ್ಡಾಯ. ಆದರೂ ಕೆಲವು ಠಾಣೆಗಳಲ್ಲಿ ಎಫ್‌ಐಆರ್ ಮತ್ತು ತನಿಖಾ ವರದಿಗಳಲ್ಲಿ ಸಂತ್ರಸ್ತರ ನೈಜ ಹೆಸರು ಗಳನ್ನು ನಮೂದಿಸುತ್ತಿರುವುದು ನಡೆಯುತತಿದೆ. ಇದು ಸಂತ್ರಸ್ತರ ಘನತೆಗೆ ಧಕ್ಕೆ ತರುತ್ತದೆ. ಈ ಹಿನ್ನೆಲೆಯಲ್ಲಿ ಹೊಸ ಸುತ್ತೋಲೆ ಹೊರಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ದೂರು ಅರ್ಜಿಯಲ್ಲಿ ಸಂತ್ರಸ್ತರ ನೈಜ ವಿವರಗಳಿರಬೇಕು. ತನಿಖಾಧಿಕಾರಿಯು ಆ ವಿವರಗಳನ್ನು ರಹಸ್ಯವಾಗಿಡಲು ಸಂತ್ರಸ್ತರಿಗೆ ಒಂದು ‘ಬದಲಿ ಹೆಸರು’ ಅಥವಾ ‘ಅಕ್ಷರ’ X ಅಥವಾ ABC ಈ ಮಾದರಿಯಲ್ಲಿ ನೀಡಬೇಕು ಎಂದು ಪೊಲೀಸ್ ಠಾಣೆ ಗಳಿಗೆ ನಿರ್ದೇಶಿಸಲಾಗಿದೆ.
ಕಟ್ಟುನಿಟ್ಟಾದ ನಿರ್ದೇಶನಗಳು ಹೀಗಿವೆ, ಸಂತ್ರಸ್ತರ ನೈಜ ಹೆಸರು ಮತ್ತು ನೀಡಲಾದ ಬದಲಿ ಹೆಸರಿನ ವಿವರಗಳನ್ನು ಒಳಗೊಂಡ ದಾಖಲೆಯನ್ನು ಸೀಲ್ ಮಾಡಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವುದು ಕಡ್ಡಾಯ. ಎಫ್‌ಐಆರ್‌ನಲ್ಲಿ ನೈಜ ಹೆಸರಿನ ಬದಲು ಬದಲಾಯಿಸಿದ ಹೆಸರನ್ನೇ ಬಳಸಬೇಕು ಮತ್ತು ಟಿಪ್ಪಣಿಯಲ್ಲಿ ʼಹೆಸರು ಬದಲಾಯಿಸಲಾಗಿದೆʼ ಎಂದು ನಮೂದಿಸಬೇಕು. ತನಿಖೆಯ ವೇಳೆ ದಾಖಲಿಸುವ ಸಾಕ್ಷಿಗಳ ಹೇಳಿಕೆಯಲ್ಲೂ ಸಂತ್ರಸ್ತರ ನೈಜ ಹೆಸರು ಇರಬಾರದು. ಬದಲಾ ಯಿಸಿದ ಹೆಸರಿನ ಪ್ರತಿಗಳನ್ನೇ ನಿತ್ಯದ ತನಿಖೆಗಳಲ್ಲಿ ಬಳಸಬೇಕು.
ನ್ಯಾಯಾಲಯಕ್ಕೆ ಸಲ್ಲಿಸುವ ಚಾರ್ಜ್‌ಶೀಟ್‌ನಲ್ಲಿ ಎರಡು ಪ್ರತಿಗಳಿರಬೇಕು. ಒಂದು ಸಂತ್ರಸ್ತೆಯ ನೈಜ ವಿವರವಿರುವ ಸೀಲ್ಡ್ ಕವರ್ ಪ್ರತಿ, ಮತ್ತೊಂದು ಆರೋಪಿ ಮತ್ತು ಅಭಿಯೋಜಕರಿಗೆ ನೀಡಲು ಬಳಸುವ ‘ಹೆಸರು ಬದಲಾಯಿಸಿದ’ ಪ್ರತಿ.
ಪೊಲೀಸ್ ಇಲಾಖೆಯ ಡಿಜಿಟಲ್ ಪೋರ್ಟಲ್‌ಗಳಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವ ಎಫ್‌ಐಆರ್‌ಗಳ ಪಟ್ಟಿಯಲ್ಲಿ ಪೋಕ್ಸೋ ಮತ್ತು ಅತ್ಯಾಚಾರ ಪ್ರಕರಣಗಳ ವಿವರಗಳು ಕಾಣದಂತೆ ತಾಂತ್ರಿಕ ಸುರಕ್ಷತಾ ಕ್ರಮ ಕೈಗೊಳ್ಳಬೇಕು.
ಈ ನಿಯಮಗಳನ್ನು ಉಲ್ಲಂಘಿಸುವ ಠಾಣಾಧಿಕಾರಿಗಳು ಅಥವಾ ತನಿಖಾಧಿಕಾರಿಗಳ ವಿರುದ್ಧ ‘ಗಂಭೀರ ಕರ್ತವ್ಯಲೋಪ’ದಡಿ ಇಲಾಖೆ ಶಿಸ್ತು ಕ್ರಮ ಕೈಗೊಳ್ಳುವುದು. ಘಟಕದ ಮುಖ್ಯಸ್ಥರು (SP/CP) ಅಧೀನ ಅಧಿಕಾರಿಗಳು ಈ ನಿಯಮ ಪಾಲಿಸುತ್ತಿದ್ದಾರೆಯೇ ಎಂದು ಮೇಲ್ವಿಚಾರಣೆ ನಡೆಸಬೇಕು. ಈ ಆದೇಶವು ಸಂತ್ರಸ್ತರಿಗೆ ಸಾಮಾಜಿಕ ಭದ್ರತೆ ನೀಡುವ ಜೊತೆಗೆ, ಕಾನೂನು ಹೋರಾಟದಲ್ಲಿ ಮುಜುಗರ ತಪ್ಪಿಸುವ ಗುರಿ ಹೊಂದಿರುತ್ತದೆ.


