ದೆಹಲಿಯ ಕೆಂಪುಕೋಟೆ ಬಳಿ ಸೋಮವಾರ ರಾತ್ರಿ ಕಾರು ಸ್ಫೋಟಗೊಂಡ ಪ್ರಕರಣದಲ್ಲಿ ಮೃತಪಟ್ಟವರ 8 ಶವದ ಗುರುತು ಪತ್ತೆ ಹಚ್ಚಲಾಗಿದೆ.
ಮೆಟ್ರೋ ನಿಲ್ದಾಣದ ಸಮೀಪ ಸೋಮವಾರ ಸಂಜೆ ನಡೆದ ಭಾರಿ ಕಾರು ಸ್ಫೋಟದಲ್ಲಿ ಮೃತಪಟ್ಟವರ ದೇಹಗಳು ಛಿದ್ರವಿದ್ರಗೊಂಡಿದ್ದರಿಂದ ಗುರುತು ಪತ್ತೆಹಚ್ಚುವುದು ಕಷ್ಟವಾಗಿತ್ತು.
ಸ್ಫೋಟದಲ್ಲಿ ಈವರೆಗೆ 12 ಮಂದಿ ಪ್ರಾಣ ಕಳೆದುಕೊಂಡಿದ್ದಾಗಿ ಅಧಿಕಾರಿಗಳು ದೃಢಪಡಿಸಿದ್ದಾರೆ. ಈ ಪೈಕಿ ಎಂಟು ಜನರನ್ನು ಗುರುತಿಸಲಾಗಿದೆ. ಉಳಿದವರ ದೇಹಗಳು ಗುರುತಿಸಲಾಗದಷ್ಟು ಛಿದ್ರಗೊಂಡಿವೆ.
ಮೃತದೇಹಗಳ ಬಗ್ಗೆ ವಿಚಾರಿಸಲು ಸಂಬಂಧಿಕರು ಮಂಗಳವಾರ ಆಸ್ಪತ್ರೆಯ ಆವರಣದಲ್ಲಿ ಜಮಾಯಿಸಿದ್ದರು. ವಿಧಿವಿಜ್ಞಾನ ತಜ್ಞರು ಮತ್ತು ತನಿಖಾಧಿಕಾರಿಗಳು ಡಿಎನ್‌ಎ ಮಾದರಿಗಳ ಮೂಲಕ ದೀರ್ಘ ವೈದ್ಯಕೀಯ ಹಾಗೂ ಕಾನೂನು ಗುರುತಿನ ಮೂಲಕ ಶವಗಳನ್ನು ಗುರುತು ಪತ್ತೆಹಚ್ಚುವ ಕೆಲಸ ನಡೆದಿತ್ತು.
ಮೊದಲು ಗುರುತಿಸಲಾದ ಶವಗಳಲ್ಲಿ ಒಂದು ದೆಹಲಿ ಸಾರಿಗೆ ನಿಗಮ (ಡಿಟಿಸಿ) ಬಸ್ ಕಂಡಕ್ಟರ್ ಅಶೋಕ್ ಕುಮಾರ್ (34) ಅವರದ್ದು ಎಂದು ತಿಳಿದು ಬಂದಿದೆ. ಕೆಲಸ ಮುಗಿಸಿ ನಗರದ ಜಗತ್‌ಪುರಿಯಲ್ಲಿರುವ ಬಾಡಿಗೆ ಮನೆಗೆ ಹಿಂತಿರುಗುತ್ತಿದ್ದಾಗ ತಮ್ಮದೇ ಊರಿನ ಉತ್ತರ ಪ್ರದೇಶದ ಅಮ್ರೋಹಾದವ ಸ್ನೇಹಿತ ರಸಗೊಬ್ಬರ ವ್ಯಾಪಾರಿ ಲೋಕೇಶ್ ಅಗರ್‌ವಾಲ್ ಜೊತೆ ಹೋಗುತ್ತಿದ್ದಾಗ ಇಬ್ಬರೂ ಸ್ಫೋಟದಲ್ಲಿ ಮೃತಪಟ್ಟಿದ್ದರು.
ಅಶೋಕ್ ಅವರ ಪತ್ನಿ, ಏಳು ಮತ್ತು ಒಂಬತ್ತು ವರ್ಷದ ಇಬ್ಬರು ಹೆಣ್ಣುಮಕ್ಕಳು ಮತ್ತು ಆರು ವರ್ಷದ ಮಗ ಬದುಕುಳಿದಿದ್ದಾರೆ ಎಂದು ಅವರ ಅತ್ತಿಗೆ ಸುಮತಿ ಎಂಬವರು ಮಾಹಿತಿ ನೀಡಿದ್ದಾರೆ.
ಸರ್ ಗಂಗಾ ರಾಮ್ ಆಸ್ಪತ್ರೆಯಲ್ಲಿ ದಾಖಲಾಗಿರುವ ತಮ್ಮ ಸಂಬಂಧಿಯನ್ನು ಭೇಟಿ ಮಾಡಲು ದೆಹಲಿಗೆ ತೆರಳಿದ್ದ ಲೋಕೇಶ್ ಅವರ ಸಂಬಂಧಿಕರು, ಮೊಬೈಲ್ ಫೋನ್‌ನಲ್ಲಿ ಕೊನೆಯದಾಗಿ ಡಯಲ್ ಮಾಡಲಾದ ಸಂಖ್ಯೆಯಿಂದ ಬಂದ ಕರೆಯ ನಂತರ ಅವರ ಸಾವಿನ ಸುದ್ದಿ ತಿಳಿದುಕೊಂಡಿದ್ದಾರೆ. ಇದನ್ನು ದೆಹಲಿ ಪೊಲೀಸರು ಪತ್ತೆ ಮಾಡಿದ್ದಾರೆ.
ಗುರುತು ಹಿಡಿಯಲಾದ ಮತ್ತೊಬ್ಬರು ಅಂದರೆ ಉತ್ತರ ಪ್ರದೇಶದ ವ್ಯಕ್ತಿ ದಿನೇಶ್ ಮಿಶ್ರಾ. ಇವರು ಸುಮಾರು 12 ವರ್ಷಗಳಿಂದ ದೆಹಲಿಯಲ್ಲಿ ವಾಸಿಸುತ್ತಿದ್ದು, ಚಾವರಿ ಬಜಾರ್‌ನ ಕಾರ್ಡ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ರೀನಾ, ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಬದುಕುಳಿದಿದ್ದಾರೆ. ಇವರ ಕುಟುಂಬವು ಮೃತದೇಹವನ್ನು ಉತ್ತರ ಪ್ರದೇಶದ ಶ್ರಾವಸ್ತಿಯ ಇಕೌನಾ ಪೊಲೀಸ್ ಠಾಣಾ ವ್ಯಾಪ್ತಿಯ ಅವರ ಸ್ವಗ್ರಾಮ ಚಿಕ್ನಿ ಪೂರ್ವ ಗಣೇಶ್ ಪುರ್‌ಗೆ ತೆಗೆದುಕೊಂಡು ಹೋಗಿದ್ದಾರೆ. ದೆಹಲಿಯಲ್ಲೇ ವಾಸಿಸುವ ಮತ್ತು ಕೆಲಸ ಮಾಡುತ್ತಿರುವ ದಿನೇಶ್ ಅವರ ಸಹೋದರನಿಂದ ಅವರಿಗೆ ಘಟನೆಯ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಮೃತಪಟ್ಟವರಲ್ಲಿ ಶಾಸ್ತ್ರಿ ಪಾರ್ಕ್‌ನ 35 ವರ್ಷದ ಬ್ಯಾಟರಿ ಚಾಲಿತ ರಿಕ್ಷಾ (ಇ-ರಿಕ್ಷಾ) ಚಾಲಕ ಜುಮ್ಮನ್ ಕೂಡ ಸೇರಿದ್ದಾರೆ. ಸ್ಫೋಟಕ್ಕೆ ಸ್ವಲ್ಪ ಮೊದಲು ಚಾಂದನಿ ಚೌಕ್‌ನಲ್ಲಿರುವ ತಮ್ಮ ಸಾಮಾನ್ಯ ಪಿಕಪ್ ಮತ್ತು ಡ್ರಾಪ್ ಸೈಟ್‌ನಲ್ಲಿ ಇವರನ್ನು ಬಿಡಲಾಗಿತ್ತು ಎಂದು ಅವರ ಚಿಕ್ಕಪ್ಪ ಮೊಹಮ್ಮದ್ ಇದ್ರಿಸ್ ಈಟಿವಿ ಭಾರತ್‌ಗೆ ತಿಳಿಸಿದರು. ಸಂಜೆ ಅವರು ಪ್ರತಿದಿನ ಹೋಗುತ್ತಿದ್ದ ಕೆಂಪುಕೋಟೆಯ ಅದೇ ಸ್ಥಳಕ್ಕೆ ಹೋಗಿದ್ದರು. ಕೆಂಪು ಕೋಟೆಯ ಬಳಿ ಅವರನ್ನು ಕೊನೆಯದಾಗಿ ಮಾತನಾಡಿದ್ದೆವು. ನಂತರ, ನಾವು ಅವರೊಂದಿಗಿನ ಎಲ್ಲ ಸಂಪರ್ಕವನ್ನೂ ಕಳೆದುಕೊಂಡೆವು ಎಂದು ಇದ್ರಿಸ್ ಹೇಳಿದರು.


