ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆಯಲ್ಲಿ ಗುಂಡೇಟು ತಗುಲಿ ವ್ಯಕ್ತಿ ಮೃತಪಟ್ಟಿದ್ದರೂ ಆರೋಪಿಯನ್ನು ಸರ್ಕಾರ ಬಂಧಿಸಿಲ್ಲ, ಶಾಸಕ ಜನಾರ್ಧನ ರೆಡ್ಡಿಯನ್ನು ಟಾರ್ಗೆಟ್ ಮಾಡಿ ಗುಂಡು ಹಾರಿಸಲಾಗಿದೆ, ಯಾರು ಗುಂಡು ಹಾರಿಸಿರುವುದು ಎಂಬುದು ಸಾಬೀತಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾಲ್ಮೀಕಿ ಪುತ್ಥಳಿ ಅನಾವರಣ ಸಂಬಂಧ ಬಳ್ಳಾರಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ಮನೆ ಎದುರು ಬ್ಯಾನರ್ ಕಟ್ಟುವ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದಿದ್ದು, ಗಲಾಟೆ ವಿಕೋಪಕ್ಕೆ ಹೋಗಿ ಕಲ್ಲು ತೂರಾಟ ನಡೆಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಈ ವೇಳೆ ಖಾಸಗಿ ವ್ಯಕ್ತಿಗಳ ಗನ್ ಮ್ಯಾನ್ಗಳು ಕೂಡ ಗುಂಡು ಹಾರಿಸಿದ್ದಾರೆ. ಗಲಾಟೆಯಲ್ಲಿ ಗುಂಡು ತಗುಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಎಂಬವರು ಮೃತಪಟ್ಟಿದ್ದಾರೆ. ಶಾಸಕ ಭರತ್ ರೆಡ್ಡಿ ಆಪ್ತ ಸತೀಶ್ ಮೂಲಕ ತನ್ನ ಕೊಲೆಗೆ ಸಂಚು ಮಾಡಲಾಗಿದೆ. ಬ್ಯಾನರ್ ಗಲಾಟೆ ನೆಪದಲ್ಲಿ ನಮ್ಮ ಮನೆ ಬಳಿ ಗುಂಡಿನ ದಾಳಿ ನಡೆಸಲಾಗಿದೆ ಎಂದು ಶಾಸಕ ಜನಾರ್ಧನ ರೆಡ್ಡಿ ಆರೋಪಿಸಿದ್ದಾರೆ.
ಕಾಂಗ್ರೆಸ್ನವರಿಂದ ಗುಂಡು ಹಾರಿದ್ದರೆ ಮುಖ್ಯಮಂತ್ರಿ ಏನು ಕ್ರಮ ತಗೊಳ್ಳುವಿರಿ ಎಂದು ಪ್ರಶ್ನಿಸಿದ ಆರ್ ಅಶೋಕ, ನಾಳೆ ಸಿದ್ದರಾಮಯ್ಯ ಇದು ಮಿಸ್ ಫೈರ್, ಮಿಸ್ ಫೈರ್ ಆಗಿ ವ್ಯಕ್ತಿ ಸತ್ತೋದ ಹೇಳಬಹುದು. ನಾಳೆ ಅವರು ಹೇಳಬಹುದಾದ ಮಾತನ್ನು ನಾನೇ ಇವತ್ತು ಹೇಳುತ್ತಿದ್ದೇನೆ ಎಂದು ಕಿಡಿ ಕಾರಿದರು.
ಇದೀಗ ಬಿಜೆಪಿ ನಿಯೋಗದಿಂದ ಡಿಜಿಗೆ ದೂರು ನೀಡಿದ್ದೇವೆ. ಸಂಜೆಯೊಳಗೆ ಮಾಹಿತಿ ಕೊಡ್ತೇನೆ ಎಂದು ಡಿಜಿ ಹೇಳಿದ್ದಾರೆ. ಗುಂಡು ಹಾರಿಸಿದ ಕಾಂಗ್ರೆಸ್ನ ಕೊಲೆಗಾರ ಯಾರು, ಕಾರಣನಾದ ಶಾಸಕನನ್ನು ಇನ್ನೂ ಬಂಧಿಸಿಲ್ಲ. ಒಂದು ವೇಳೆ ನಾಳೆ ಕಾಂಗ್ರೆಸ್ ಶಾಸಕರ ಕಡೆಯಿಂದಲೇ ಫೈರ್ ಆಗಿದ್ದು ಪ್ರೂವ್ ಆದ್ರೆ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರಾ ಎಂದು ಸವಾಲು ಹಾಕಿದರು.
ಬಳ್ಳಾರಿ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡ ನಾವು ಅಂದರೆ ಬಿಜೆಪಿ ನಿಯೋಗವು ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಹಾಗೂ ಬೆಂಬಲಿಗರ ವಿರುದ್ಧ ಕ್ರಮಕ್ಕೆಆಗ್ರಹಿಸಿ, ನ್ಯಾಯಕ್ಕೆ ಒತ್ತಾಯಿಸಿ ಡಿಜಿಪಿಗೆ ದೂರು ನೀಡಿದ್ದೇವೆ, ಕೊಲೆಗಾರರಿಗೆ ಶಿಕ್ಷೆಯಾಗಬೇಕು ಎಂದರು. ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ಸುನೀಲ್ ಕುಮಾರ್, ಸಿಸಿ ಪಾಟೀಲ್, ಸಿದ್ದು ಸವದಿ, ಮಹೇಶ್ ಟೆಂಗಿನಕಾಯಿ ಹಾಗೂ ಪರಿಷತ್ ಸದಸ್ಯ ಕೇಶವ ಪ್ರಸಾದ್ ನಿಯೋಗದಲ್ಲಿದ್ದರು.
ವಾಲ್ಮೀಕಿ ಪುತ್ಥಳಿ ಅನಾವರಣ ಸಂಬಂಧ ಬಳ್ಳಾರಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ಮನೆ ಎದುರು ಬ್ಯಾನರ್ ಕಟ್ಟುವ ವಿಚಾರಕ್ಕೆ ಗುಂಪುಗಳ ನಡುವೆ ನಡೆದ ಗಲಾಟೆ ವೇಳೆ ಮೃತಪಟ್ಟ ರಾಜಶೇಖರ್ ರೆಡ್ಡಿಗೆ ಯಾರ ಗನ್ನಿಂದ ಬುಲೆಟ್ ಹಾರಿದೆ ಎಂಬುದನ್ನು ಪತ್ತೆ ಹಚ್ಚಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.


