ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯುನ್ ಆಗಿ ಹೊರಹೊಮ್ಮುತ್ತಿದ್ದಂತೆ ಭಾರತ ತಂಡದ ಆಟಗಾರರ ರ್ಯಾಂಕಿಂಗ್ ನಲ್ಲೂ ಸಾಕಷ್ಟು ಸುಧಾರಣೆ ಕಂಡಿದೆ.
ಬುಧವಾರ ಬಿಡುಗಡೆ ಆದ ಐಸಿಸಿ ಏಕದಿನ ರ್ಯಾಂಕಿಂಗ್ ನಲ್ಲಿ ಭಾರತ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದ ಶುಭಮನ್ ಗಿಲ್, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಅಗ್ರ ೫ರಲ್ಲಿ ಸ್ಥಾನ ಪಡೆದಿದ್ದಾರೆ.
ಬ್ಯಾಟಿಂಗ್ ರ್ಯಾಂಕಿಂಗ್ ನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮ 2 ಸ್ಥಾನ ಮೇಲೇರಿ 3ನೇ ಸ್ಥಾನ ಪಡೆಯುವ ಮೂಲಕ 5ರೊಳಗೆ ಪ್ರವೇಶಿಸಿದ್ದಾರೆ. ವಿರಾಟ್ ಕೊಹ್ಲಿ 5 ಮತ್ತು ಹೆನ್ರಿಚ್ ಕ್ಲಾಸೆನ್ 4ನೇ ಸ್ಥಾನದಲ್ಲಿದ್ದರೆ, ಶುಭಮನ್ ಗಿಲ್ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ.
ರೋಹಿತ್ ಶರ್ಮ ಫೈನಲ್ ನಲ್ಲಿ 76 ರನ್ ಸಿಡಿಸುವ ಮೂಲಕ ಪಂದ್ಯಶ್ರೇಷ್ಠ ಪುರಸ್ಕಾರಕ್ಕೆ ಪಾತ್ರರಾದರು. ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ಧ ಶತಕ ಸಿಡಿಸಿದರೆ, ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ 84 ರನ್ ಬಾರಿಸಿ ಗಮನ ಸೆಳೆದಿದ್ದರು. ಶುಭಮನ್ ಗಿಲ್ ಬಾಂಗ್ಲಾದೇಶ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಮೊದಲ ಪಂದ್ಯದಲ್ಲೇ ಶತಕ ಗಳಿಸಿದ್ದರು.
ಪಾಕಿಸ್ತಾನ ತಂಡ ಒಂದೂ ಪಂದ್ಯ ಗೆಲ್ಲದೇ ಟೂರ್ನಿಯಿಂದಲೇ ಹೊರಬಿದ್ದರೂ ತಂಡದ ಮಾಜಿ ನಾಯಕ ಬಾಬರ್ ಅಜಮ್ 2ನೇ ಸ್ಥಾನದಲ್ಲಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಅತೀ ಹೆಚ್ಚು 243 ರನ್ ಗಳಿಸಿದ ಶ್ರೇಯಸ್ ಅಯ್ಯರ್ 2ನೇ ಸ್ಥಾನ ಗಳಿಸಿದರೆ, 218 ರನ್ ಗಳಿಸಿರುವ ಕೊಹ್ಲಿ 4ನೇ ಸ್ಥಾನದಲ್ಲಿದ್ದಾರೆ. ಕೆಎಲ್ ರಾಹುಲ್ 1 ಸ್ಥಾನ ಕುಸಿದು ಅಗ್ರ ೨೦ರೊಳಗೆ ಸ್ಥಾನ ಉಳಿಸಿಕೊಂಡಿದ್ದಾರೆ.
ಮೂರಕ್ಕೇರಿದ ಕುಲದೀಪ್
ಸ್ಪಿನ್ನರ್ ಕುಲದೀಪ್ ಯಾದವ್ ಐಸಿಸಿ ಏಕದಿನ ಬೌಲರ್ ಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ. ರವೀಂದ್ರ ಜಡೇಜಾ 10ನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ. ಜಸ್ ಪ್ರೀತ್ ಬುಮ್ರಾ ಗಾಯದ ಕಾರಣ ಆಡದೇ ಅಗ್ರ ೧೦ರಿಂದ ಹೊರಬಿದ್ದಿದ್ದಾರೆ.