ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ದೆಹಲಿ ಪೊಲೀಸ್ ನೋಟಿಸ್ ಗೆ ಉತ್ತರಿಸಲು ಕಾಲಾವಕಾಶ ಕೇಳುವೆ, ಸಮಯ ಕೊಟ್ಟರೆ ಅಧಿವೇಶನ ಬಳಿಕ ಉತ್ತರಿಸಲು ಬರುವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು. ದೆಹಲಿ ಪೊಲೀಸರ ನೋಟಿಸ್ ಗೆ ಉತ್ತರ ನೀಡುವ ಬಗ್ಗೆ ಕೇಳಿದಾಗ, “ಸೋಮವಾರ ದೆಹಲಿ ಪೊಲೀಸರಿಗೆ ಉತ್ತರ ನೀಡಲು ನಿರ್ಧರಿಸಿದ್ದೆ. ಆದರೆ ಶಾಮನೂರು ಶಿವಶಂಕರಪ್ಪ ಅವರ ನಿಧನದ ಹಿನ್ನೆಲೆಯಲ್ಲಿ ವಿಶೇಷ ವಿಮಾನದಲ್ಲಿ ದಾವಣಗೆರೆಗೆ ತೆರಳುತ್ತಿದ್ದು, ಅಧಿವೇಶನ ಮುಗಿದ ಬಳಿಕ ಉತ್ತರ ನೀಡಲು ಕಾಲಾವಕಾಶ ಕೇಳುತ್ತೇನೆ” ಎಂದು ತಿಳಿಸಿದರು.
“ಪೊಲೀಸರು ನೀಡಿರುವ ನೋಟಿಸ್ ಗೆ ನನ್ನ ಉತ್ತರದ ಪ್ರತಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತೇನೆ. ಏಕೆಂದರೆ ಅವರು ಎಫ್ಐಆರ್ ಪ್ರತಿಯನ್ನು ಲಗತ್ತಿಸಿಲ್ಲ. ಇ.ಡಿ.ಗೆ ಈಗಾಗಲೇ ಉತ್ತರ ನೀಡಿದ್ದೇವೆ. ಎಫ್ಐಆರ್ ಪ್ರತಿಯಲ್ಲಿ ಏನಿದೆ ಎಂದು ಓದಿಲ್ಲ. ಕೇವಲ ನೋಟಿಸ್ ಮಾತ್ರ ನೀಡಿದ್ದಾರೆ. ಎಫ್ಐಅರ್ ಪ್ರತಿ ನೀಡಿ ಎಂದು ಕೇಳುತ್ತೇನೆ” ಎಂದರು.
ಕೆ.ಸಿ ವೇಣುಗೋಪಾಲ್ ಹಾಗೂ ಸುರ್ಜೆವಾಲ ಅವರನ್ನು ಭೇಟಿಯಾಗಿರುವ ಬಗ್ಗೆ ಕೇಳಿದಾಗ, “ನಾನು ದೆಹಲಿಗೆ ಬಂದಾಗ ಎಲ್ಲರನ್ನೂ ಭೇಟಿ ಮಾಡಬೇಕು. ಸುರ್ಜೆವಾಲ ಅವರನ್ನು, ಮಲ್ಲಿಕಾರ್ಜುನ ಖರ್ಗೆ ಸಾಹೇಬರನ್ನು, ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಬೇಕು. ನಿನ್ನೆ ಇಂದಿರಾ ಭವನದಲ್ಲಿ ನಡೆದ ಭೋಜನ ಕೂಟದಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರನ್ನೂ ಭೇಟಿ ಮಾಡಿದ್ದೆ” ಎಂದು ತಿಳಿಸಿದರು.
ಇಂದು ವೈಯಕ್ತಿಕವಾಗಿ ಭೇಟಿ ಮಾಡುತ್ತೀರಾ ಎಂದು ಕೇಳಿದಾಗ, “ಇಂದು ಖರ್ಗೆ ಸಾಹೇಬರ ಜೊತೆಯಲ್ಲೇ ದಾವಣಗೆರೆಗೆ ಹೋಗುತ್ತಿದ್ದೇವೆ. ತುರ್ತು ಕಾರಣಕ್ಕೆ ವಿಶೇಷ ವಿಮಾನ ವ್ಯವಸ್ಥೆ ಮಾಡಲಾಗಿತ್ತು. ಮಂಜು ಕವಿದ ವಾತಾವರಣ ಇರುವ ಕಾರಣಕ್ಕೆ ತಡವಾಯಿತು” ಎಂದರು.
ಅಧಿವೇಶನ ಮುಗಿದ ಬಳಿಕ ಮತ್ತೆ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುತ್ತೀರಾ ಎಂದು ಕೇಳಿದಾಗ, “ಪಕ್ಷದಲ್ಲಿ ನಮ್ಮ ಅವರ ಮಧ್ಯೆ ಮಾತುಕತೆ ಇದ್ದೇ ಇರುತ್ತದೆ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ” ಎಂದರು.


