ಇಲ್ಲಿನ ಜನಪ್ರತಿನಿಧಿ (ಶಾಸಕ ಮುನಿರತ್ನಂ ನಾಯ್ಡು) ವರ್ತನೆ ನೋಡಿದರೆ, ನೀವು ಎಂತಹ ನರಕದಲ್ಲಿ ಬದುಕುತ್ತಿದ್ದೀರಿ ಎನಿಸುತ್ತಿದೆ. ಇಂತಹ ಶಾಸಕರನ್ನು ಆಯ್ಕೆ ಮಾಡಿಕೊಂಡ ನಿಮ್ಮ ಪರಿಸ್ಥಿತಿ ನನಗೆ ಅರ್ಥವಾಗುತ್ತದೆ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮತ್ತಿಕೆರೆಯ ಜೆ.ಪಿ. ಪಾರ್ಕ್ ನಲ್ಲಿ ಬೆಂಗಳೂರು ನಡಿಗೆ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರ ಸಂವಾದ ವೇಳೆ ಶಿವಕುಮಾರ್ ಮಾತನಾಡಿದರು. ಸಾರ್ವಜನಿಕರ ಜತೆ ತಾವು ನಡೆಸುತ್ತಿದ್ದ ಸಂವಾದ ಕಾರ್ಯಕ್ರಮಕ್ಕೆ ಮುನಿರತ್ನಂ ನಾಯ್ಡು ಮತ್ತವರ ಬೆಂಬಲಿಗರು ಅಡ್ಡಿಪಡಿಸಿದ ಬಗ್ಗೆ ಡಿಸಿಎಂ ತೀವ್ರ ಬೇಸರ ವ್ಯಕ್ತಪಡಿಸಿದರು.
ಸ್ಥಳೀಯ ಶಾಸಕ ಮುನಿರತ್ನ ಅವರಿಗೆ ತಾಳ್ಮೆಯಿಲ್ಲ. ಅವರು ಕಾರ್ಯಕ್ರಮವನ್ನು ಹಾಳು ಮಾಡಬೇಕು ಎಂದೇ ಬಂದರೋ ಏನೋ. ಇದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ, ನೀವೂ ತಲೆಕೆಡಿಸಿಕೊಳ್ಳಬೇಡಿ. ಇಂತಹವರನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ನಿಮ್ಮ ಮನಸ್ಸಿಗೆ ಬಹಳ ನೋವಾಗುತ್ತಿದೆ ಎಂದು ನನಗೆ ಚನ್ನಾಗಿ ಗೊತ್ತಿದೆ. ಇದಕ್ಕೆಲ್ಲಾ ಸೂಕ್ತ ಸಮಯದಲ್ಲಿ ಉತ್ತರ ನೀಡಿ ಎಂದು ಹೇಳಿದರು.
ಇಂತಹ ಪ್ರತಿನಿಧಿಯನ್ನು (ಮುನಿರತ್ನಂ ನಾಯ್ಡು) ಇಟ್ಟುಕೊಳ್ಳುವುದೋ, ಬೇಡವೋ ಎಂಬುದನ್ನು ಜನ ತೀರ್ಮಾನ ಮಾಡಬೇಕು. ಇದರ ಬಗ್ಗೆ ನಾನು ಹೆಚ್ಚು ಮಾತನಾಡಲು ಹೋಗುವುದಿಲ್ಲ. ಜನಪ್ರತಿನಿಧಿಗಳಿಗೆ ಏನು ಗೌರವ ನೀಡಬೇಕು ಎನ್ನುವ ಅರಿವು ನನಗಿದೆ. ರಾಜಕಾರಣದಲ್ಲಿ ಸೋಲು, ಗೆಲುವು ಇದ್ದೇ ಇರುತ್ತದೆ ಯಾವುದೂ ಶಾಶ್ವತವಲ್ಲ ಎಂದು ತಿಳಿಸಿದರು.
ಡಿಕೆ ಶಿವಕುಮಾರ್ ಪಾರ್ಕ್‌ನಲ್ಲಿ ಮಾತನಾಡುತ್ತಿರಬೇಕಾದರೆ ಬಂದ ಶಾಸಕ ಮುನಿರತ್ನ ಅವರು, ಮೈಕ್ ಕೊಡಿ ಒಂದು ನಿಮಿಷ ಎಂದರು, ಮೈಕ್ ತಗೊಂಡು ಈ ಕಾರ್ಯಕ್ರಮಕ್ಕೆ ನಂಗೆ ಆಹ್ವಾನವಿಲ್ಲ, ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ ಬಂದಿದ್ದೇನೆ ಎಂದರು. ಆಗ ಡಿಸಿಎಂ, ಸಂತೋಷ ಕುಳಿತುಕೊಳ್ಳಿ ಎಂದರು, ಮತ್ತೆ ಮಧ್ಯೆ ಪ್ರವೇಶ ಮಾಡಿದ ಮುನಿರತ್ನ , ಒಂದು ಎಂಪಿ, ಶಾಸಕರ ಪೋಟೋ ಇಲ್ಲ, ಇದು ಸಾರ್ವಜನಿಕ ಕುಂದು ಕೊರತೆ ನೀಗಿಸುವ ಕಾರ್ಯಕ್ರಮವಲ್ಲ, ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಎಂದರು.
ಈ ವೇಳೆ ಬೆಂಬಲಿಗರು, ಕಾರ್ಯಕರ್ತರು ಗಲಾಟೆ ಮಾಡಿದಾಗ ಶಿವಕುಮಾರ್ ಮೈಕ್ ಮೈಕ್ ಕಿತ್ತುಕೊಳ್ಳಲು ಹೇಳಿದ್ದಾರೆ. ಆಗ ಬೆಂಬಲಿಗರು ಮುನಿರತ್ನ ವಿರುದ್ಧ ರೇಪಿಸ್ಟ್ ರೇಪಿಸ್ಟ್ ಎಂದು ಘೋಷಣೆ ಕೂಗಿದರು.