ಐ ಲವ್ ಯೂ ಎಂದು ಹೇಳುವ ಮೂಲಕ ವ್ಯಕ್ತಿ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆಯೇ ವಿನಹ ಅದು ಲೈಂಗಿಕ ದೌರ್ಜನ್ಯಕ್ಕೆ ಸಮನಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
2015ರಲ್ಲಿ 17 ವರ್ಷದ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ದೋಷಿಯಾಗಿದ್ದ ವ್ಯಕ್ತಿಯನ್ನು ಕೋರ್ಟ್ ದೋಷಮುಕ್ತಗೊಳಿಸಿದೆ.
2015ರಲ್ಲಿ 35 ವರ್ಷದ ವ್ಯಕ್ತಿ 17 ವರ್ಷದ ಬಾಲಕಿಯನ್ನು ತಡೆದು, ಆಕೆಯ ಕೈ ಹಿಡಿದು ‘ಐ ಲವ್ ಯೂ’ ಎಂದು ಹೇಳಿದ್ದ. ಬಾಲಕಿಯ ಕುಟುಂಬವು ವ್ಯಕ್ತಿಯ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪದಡಿ ದೂರು ದಾಖಲಿಸಿತ್ತು. 2017ರಲ್ಲಿ ನಾಗ್ಪುರದ ಸೆಷನ್ಸ್ ಕೋರ್ಟ್ ಈ ಪ್ರಕರಣವನ್ನು ವಿಚಾರಣೆ ನಡೆಸಿ ಆತನನ್ನು ದೋಷಿಯೆಂದು ಘೋಷಿಸಿ ಮೂರು ವರ್ಷದ ಜೈಲು ಶಿಕ್ಷೆಯನ್ನು ವಿಧಿಸಿತ್ತು.
ಈ ತೀರ್ಪಿನ ವಿರುದ್ಧ ಆರೋಪಿಯು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಊರ್ಮಿಳಾ ಜೋಶಿ-ಫಾಲ್ಕೆ ನೇತೃತ್ವದ ಪೀಠವು, ‘ಐ ಲವ್ ಯೂ’ ಎಂಬ ಹೇಳಿಕೆ ಭಾವನಾತ್ಮಕ ಅಭಿವ್ಯಕ್ತಿಯಾಗಿದ್ದು, ಲೈಂಗಿಕ ದೌರ್ಜನ್ಯದ ಉದ್ದೇಶದೊಂದಿಗೆ ಸಂಬಂಧ ಕಲ್ಪಿಸಲಾಗದು ಎಂದು ಕೋರ್ಟ್ ಆದೇಶದಲ್ಲಿ ಸ್ಪಷ್ಟಪಡಿಸಿ ಸೆಷನ್ಸ್ ಕೋರ್ಟ್‌ನ ತೀರ್ಪನ್ನು ರದ್ದುಗೊಳಿಸಿ ಆರೋಪಿಯನ್ನು ಖುಲಾಸೆಗೊಳಿಸಿದೆ.
ನ್ಯಾಯಮೂರ್ತಿ ಜೋಶಿ-ಫಾಲ್ಕೆ ತೀರ್ಪಿನಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಸ್ಪಷ್ಟವಾಗಿ ವಿವರಿಸಿ, “ಲೈಂಗಿಕ ಕಿರುಕುಳ ಎಂದರೆ, ಅನುಚಿತವಾಗಿ ಸ್ಪರ್ಶಿಸುವುದು, ಬಲವಂತವಾಗಿ ಬಟ್ಟೆ ಕಳಚುವುದು, ಅಶ್ಲೀಲ ಸನ್ನೆಗಳನ್ನು ಮಾಡುವುದು ಅಥವಾ ಅಸಭ್ಯವಾಗಿ ವರ್ತಿಸುವುದು. ಇಂತಹ ಕೃತ್ಯಗಳು ಕಾನೂನಿನಡಿ ಖಂಡನೀಯ” ಎಂದು ತಿಳಿಸಿದ್ದಾರೆ. ಆದರೆ, ಈ ಪ್ರಕರಣದಲ್ಲಿ ಆರೋಪಿಯ ವರ್ತನೆಯು ಹೀಗೆಲ್ಲ ಇಲ್ಲ, ಆತನ ವಿರುದ್ಧದ ಆರೋಪಗಳನ್ನು ಕೈಬಿಡಲಾಗಿದೆ ಎಂದಿದ್ದಾರೆ.