Menu

ಬೆಂಗಳೂರು ನಗರದ ಘನತೆಗೆ ಘಾಸಿ ಮಾಡಬೇಡಿ ಎಂದು ಉದ್ಯಮಿಗಳಿಗೆ ಹೇಳಿದ್ದೇನೆ: ಡಿಸಿಎಂ

“ಉದ್ಯಮಿಗಳು ನಮ್ಮ ಸಹೋದರ, ಸಹೋದರಿಯರು. ಬೆಂಗಳೂರು ನಿಮ್ಮ ನಗರ, ಇದರ ಘನತೆಗೆ ಘಾಸಿ ಮಾಡಬೇಡಿ ಎಂದು ಹೇಳಿದ್ದೇನೆ. ನಮ್ಮನ್ನು ಟೀಕೆ ಮಾಡಿದವರನ್ನು ದೂರ ಮಾಡಲು ಆಗುವುದಿಲ್ಲ. ಅವರ ಸಲಹೆ ಸೂಚನೆಗಳನ್ನು ನಾವು ಕೇಳಬೇಕು” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

ಕಬ್ಬನ್ ಪಾರ್ಕ್ ನಲ್ಲಿ ಭಾನುವಾರ ಬೆಂಗಳೂರು ನಡಿಗೆ ಕಾರ್ಯಕ್ರಮದ ಅಂಗವಾಗಿ ನಡೆದ ನಾಗರಿಕರ ಜತೆ ಸಂವಾದದ ನಂತರ ಶಿವಕುಮಾರ್  ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಉದ್ಯಮಿಗಳ ಜೊತೆ ಡಿನ್ನರ್ ಮೀಟಿಂಗ್ ಬಗ್ಗೆ ಕೇಳಿದಾಗ, “ನೀವು ಟೀಕೆ‌ ಮಾಡಿದರೆ ಈ ನಗರದ ಬಗ್ಗೆ ಅಂತರರಾಷ್ಟ್ರೀಯ ಸುದ್ದಿಯಾಗುತ್ತದೆ‌ ಎಂದು ಅವರಿಗೆ ಹೇಳಿದ್ದೇನೆ.  ಮೋಹನ್ ದಾಸ್ ಪೈ, ಕಿರಣ್ ಮಜುಂದಾರ್ ಷಾ ಮತ್ತಿತರರ ಜೊತೆ ಮಾತುಕತೆ ನಡೆಸಲಾಯಿತು. ಎಲ್ಲರೂ ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಅತ್ಯುತ್ತಮ ಸಲಹೆಗಳನ್ನು ನೀಡಿದ್ದಾರೆ. ಪ್ರಜಾಪ್ರಭುತ್ವ ಹಾಗೂ ಅಧಿಕಾರಶಾಹಿ ವ್ಯವಸ್ಥೆಯಲ್ಲಿ ಕೆಲಸ ಮಾಡುವಾಗ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ ಮುಖ್ಯ ಸಲಹಾ ಸಮಿತಿಗೆ ಅವರುಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. ಅವರು ಸಹ ತೆರಿಗೆ ಪಾವತಿದಾರರು. ಬೆಂಗಳೂರಿನ ನಾಗರಿಕರಾದ ಅವರ ಮಾತುಗಳನ್ನೂ ಕೇಳಬೇಕಲ್ಲವೇ?” ಎಂದರು.

ರೆಡ್ ಲೈನ್ ಮೆಟ್ರೋ; ಕೇಂದ್ರ ಸಚಿವರಿಗೆ ಮನವಿ

ರೆಡ್ ಲೈನ್ ಮೆಟ್ರೋಗೆ ಕೇಂದ್ರ ಸರ್ಕಾರ ಅನುಮತಿ ನೀಡಿರಲಿಲ್ಲ. ಈಗ ಮತ್ತೊಮ್ಮೆ ಬಿಎಮ್ಆರ್‌ಸಿಎಲ್ ಡಿಪಿಆರ್ ತಯಾರಿಸಿರುವ ಬಗ್ಗೆ ಕೇಳಿದಾಗ, “ಜನಗಳ ಅನುಕೂಲಕ್ಕಾಗಿ ಮೆಟ್ರೋ ಮಾರ್ಗ ವಿಸ್ತರಣೆ ಮಾಡಲೇಬೇಕು. ಜೊತೆಗೆ ಡಬಲ್ ಡೆಕ್ಕರ್ ಸಹ ಮಾಡಬೇಕು. ಕೇಂದ್ರ ಸಚಿವರು ಇದೆ ಅ. 30 ರಂದು ಬೆಂಗಳೂರಿಗೆ ಬರಲಿದ್ದಾರೆ. ಅವರಿಗೂ ಈ ಬಗ್ಗೆ ಮನವಿ ಸಲ್ಲಿಸಲಾಗುವುದು. ಕೇಂದ್ರದಿಂದ ಶೇ. 12-13 ರಷ್ಟು ಹಣ ಕೊಡುತ್ತಿದ್ದಾರೆ. ಮಿಕ್ಕ ಹಣವನ್ನು ನಾವೇ ಬಾರಿಸುತ್ತಿರುವುದು. ನಮ್ಮ‌ ಕೆಲಸ‌ ನಾವು ಮಾಡುತ್ತಿದ್ದೇವೆ” ಎಂದು ತಿಳಿಸಿದರು.

ನಿಮ್ಮ ಕೆಲಸಗಳ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ಬಗ್ಗೆ ಕೇಳಿದಾಗ, “ಸಂಸದ ತೇಜಸ್ವಿ ಸೂರ್ಯ ಹೊರತಾಗಿ ಯಾರೂ ವಿರೋಧ ಮಾಡುತ್ತಿಲ್ಲ. ಟೀಕೆ ಮಾಡುವುದನ್ನು ನಾನು ವಿರೋಧ ಮಾಡುತ್ತಿಲ್ಲ. ಪರ್ಯಾಯ ಮಾರ್ಗಗಳ ಬಗ್ಗೆಯೂ ತಿಳಿಸಬೇಕು. ಸಾರ್ವಜನಿಕರ ಪರವಾಗಿ ಭೇಟಿ ಮಾಡುತ್ತೇವೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ. ಮಂಗಳವಾರ ಭೇಟಿಗೆ ಸಮಯ ನೀಡಿದ್ದೇನೆ. ಅವರ ಸಲಹೆಗಳು ಸೂಕ್ತವಾಗಿದ್ದರೆ ಸ್ವೀಕರಿಸಲಾಗುವುದು ಎಂದು ಹೇಳಿದರು.

ದೆಹಲಿ ಭೇಟಿ ಯಾವಾಗ ಎಂದು ಕೇಳಿದಾಗ, “ಕೆಲಸ ಇದ್ದಾಗಲೆಲ್ಲ ಹೋಗುತ್ತಿರುತ್ತೇನೆ. ಪ್ರತಿದಿನವೂ ಹೋಗುತ್ತೇನೆ, ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದೆನಿಸಿದಾಗಲೆಲ್ಲ ಭೇಟಿ ನೀಡುತ್ತೇನೆ. ಶಾಪಿಂಗ್, ಕೋರ್ಟ್ ಕೆಲಸ, ಮಾಧ್ಯಮದವರನ್ನು ಭೇಟಿ ಮಾಡಲು ಹೋಗುತ್ತಿರುತ್ತೇನೆ” ಎಂದರು.

ಅಕ್ರಮ ಬ್ಯಾನರ್ ಫ್ಲೆಕ್ಸ್ ತೆರವು

ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಅಕ್ರಮವಾಗಿ ಅಳವಡಿಸುತ್ತಿರುವ ಬಗ್ಗೆ ಹಾಗೂ ನಡಿಗೆ ಕಾರ್ಯಕ್ರಮದ ಬಗ್ಗೆಯೂ ಫ್ಲೆಕ್ಸ್ ಗಳನ್ನು ಅಳವಡಿಸಿರುವ ಬಗ್ಗೆ ಕೇಳಿದಾಗ, “ಯಾರೇ ಬ್ಯಾನರ್ ಹಾಗೂ ಫ್ಲೆಕ್ಸ್ ಅಳವಡಿಸಿದ್ದರು ತೆರವುಗೊಳಿಸುತ್ತೇವೆ. ಸರ್ಕಾರಿ ಕಾರ್ಯಕ್ರಮ ಆದ ಕಾರಣ ಜನರಿಗೆ ತಿಳಿಯಲಿ ಎಂದು ಅಳವಡಿಸಿದ್ದೇವೆ.  ನಗರದ ಎಲ್ಲಿಯೇ ಅಕ್ರಮ ಬ್ಯಾನರ್ ಅಳವಡಿಸಿದ್ದರೂ ಅವುಗಳನ್ನು ತೆರವುಗೊಳಿಸಿ ಪ್ರಕರಣ ದಾಖಲಿಸಲಾಗುವುದು. ಶಾಸಕ ರಿಜ್ವಾನ್, ಹ್ಯಾರೀಸ್ ಯಾರೇ ಅಳವಡಿಸಿದರೂ ಕೇಸ್ ದಾಖಲಿಸುತ್ತಾರೆ” ಎಂದು ಉತ್ತರಿಸಿದರು.

ಖಾತೆ ಹೆಸರಲ್ಲಿ ಕಾಂಗ್ರೆಸ್ ಸರ್ಕಾರ ಲೂಟಿ ಮಾಡುತ್ತಿದೆ ಎನ್ನುವ ಕುಮಾರಸ್ವಾಮಿ ಆರೋಪದ ಬಗ್ಗೆ ಕೇಳಿದಾಗ, “ಲೂಟಿ ಮಾಡಿದ ಹಣ ಜೇಬಿನಲ್ಲಿದ್ದರೆ ಎತ್ತುಕೊಂಡು ಹೋಗಲಿ ಅವರು” ಎಂದು ತಿರುಗೇಟು ನೀಡಿದರು.

“ಎ ಖಾತೆ, ಬಿ ಖಾತೆ ಬಗ್ಗೆ ಕೇವಲ ಟೀಕೆ ಮಾತ್ರ ಅದರಲ್ಲಿ ಯಾವುದೇ ಸಲಹೆ ಸೂಚನೆಗಳಿಲ್ಲ. ಬಿ ಖಾತೆಗಳನ್ನು ಬಿಜೆಪಿ ಅವಧಿಯಲ್ಲಿ ಮಾಡಲಾಯಿತು. ಇದನ್ನು ಮಾಡಲು ಹೇಳಿದವರು ಯಾರು? ಈಗ ಜನರು ಆಸ್ತಿ ಖರೀದಿ ಮಾಡಿದ್ದಾರೆ‌. ಆದರೆ ಯಾರಿಗೂ ಬ್ಯಾಂಕ್ ಗಳಿಂದ ಸಾಲ ದೊರೆಯುತ್ತಿಲ್ಲ. ಈಗ ಆ ಜಾಗದಲ್ಲಿ ಕಟ್ಟಿರುವ ಕಟ್ಟಡಗಳನ್ನು ಒಡೆದು ಹಾಕಲು ಆಗುತ್ತದೆಯೇ? ಈ ಹಿಂದೆ ಬೆಂಗಳೂರು ಪಕ್ಕದ ಹಳ್ಳಿಗಳಲ್ಲಿ ನಿವೇಶನ ಖರೀದಿ ಮಾಡಿದ್ದಾರೆ. ಈಗ ನಗರದ ಒಳಗೆ ಸೇರಿಕೊಂಡಿದೆ. ನಾವು ಅಂತಹ ಆಸ್ತಿಗಳನ್ನು ಗಟ್ಟಿ ಮಾಡುವ ಕೆಲಸ ಮಾಡುತ್ತಿದ್ದೇವೆ” ಎಂದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಹಿಂದೆಯೇ ಸೂಚನೆ ನೀಡಿತ್ತು ಎನ್ನುವ ಬಗ್ಗೆ ಕೇಳಿದಾಗ, “ಇದರ ಬಗ್ಗೆ ಮುಖ್ಯಮಂತ್ರಿಗಳು ಪ್ರತಿಕ್ರಿಯೆ ನೀಡುತ್ತಾರೆ” ಎಂದು ಉತ್ತರಿಸಿದರು.

Related Posts

Leave a Reply

Your email address will not be published. Required fields are marked *