ಪಾಕಿಸ್ತಾನ ಮಹಿಳೆಯನ್ನು ಮದುವೆ ಆಗಿದ್ದ ಸಿಆರ್ ಪಿಎಫ್ ಯೋಧನನ್ನು ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಸೇನೆಯಿಂದ ವಜಾಗೊಳಿಸಲಾಗಿದೆ. ಆದರೆ ಮದುವೆ ಬಗ್ಗೆ ಮೊದಲೇ ಮೇಲಾಧಿಕಾರಿಗಳಿಗೆ ಮಾಹತಿ ನೀಡಿದ್ದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಪಾಕಿಸ್ತಾನಿ ಪ್ರಜೆಯನ್ನು ಮದುವೆ ಆಗಿದ್ದ ಸಿಆರ್ ಪಿಎಫ್ ಯೋಧ ಮುನೀರ್ ಅಹ್ಮದ್ ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ಭಾರತದಲ್ಲಿ ನೆಲೆಸುವಂತೆ ನೋಡಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಆದೇಶ ಉಲ್ಲಂಘಿಸಿದ್ದಕ್ಕಾಗಿ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸಲಾಗಿದೆ.
ನಾನು ಮದುವೆ ಆಗಿರುವುದು ನನ್ನ ಮಾವನ ಮಗಳನ್ನು ದೇಶ ವಿಭಜನೆ ಆದಾಗ ನಮ್ಮ ಕುಟುಂಬಗಳು ವಿಭಜನೆ ಆಗಿದ್ದು, ಅವರು ಪಾಕಿಸ್ತಾನದ ಸಾಲರ್ ಕೋಟ್ ಗೆ ತೆರಳಿದ್ದರು. ಇದೀಗ ನಾವು ಆನ್ ಲೈನ್ ನಲ್ಲಿ ಮದುವೆ ಆಗಿದ್ದು, ಮದುವೆಯ ಆಮಂತ್ರಣ ಪತ್ರಿಕೆ ಹಾಗೂ ಮದುವೆ ಆದ ನಂತರವೂ ಮಾಹಿತಿ ನೀಡಿದ್ದೇನೆ ಎಂದು ಮುನೀರ್ ಅಹ್ಮದ್ ಹೇಳಿದ್ದಾರೆ.
ಪೆಹಲ್ಗಾವ್ ನಲ್ಲಿ ಉಗ್ರರು 26 ಪ್ರವಾಸಿಗರನ್ನು ಹತ್ಯೆಗೈದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪಾಕಿಸ್ತಾನಿ ಪ್ರಜೆಗಳು ಭಾರತ ತೊರೆಯುವಂತೆ ಸೂಚಿಸಿತ್ತು. ಸರ್ಕಾರ ನೀಡಿದ್ದ 72 ಗಂಟೆಗಳ ಅವಧಿ ಮುಕ್ತಾಯಗೊಂಡಿದ್ದರೂ ಮುನೀರ್ ಅಹ್ಮದ್ ಪತ್ನಿಯನ್ನು ಪಾಕಿಸ್ತಾನಕ್ಕೆ ಕಳುಹಿಸದೇ ಮನೆಯಲ್ಲೇ ಉಳಿಸಿಕೊಂಡಿದ್ದರು.
ಜಮ್ಮು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮುನೀರ್ ಅಹ್ಮದ್ 2024ರಲ್ಲಿ ಪಾಕಿಸ್ತಾನದ ಪಂಜಾಬ್ ಮೂಲದ ಮಿಲನ್ ಖಾನ್ ಅವರನ್ನು ಮದುವೆ ಆಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಆಗಿದ್ದ ಇಬ್ಬರೂ ಆನ್ ಲೈನ್ ನಲ್ಲಿಯೇ ಮದುವೆ ಕೂಡ ಆಗಿದ್ದರು.
ದೀರ್ಘಕಾಲ ಕಾದ ನಂತರ ಮಿಲನ್ ಖಾನ್ 2025 ಮಾರ್ಚ್ ನಲ್ಲಿ ಭಾರತಕ್ಕೆ ಆಗಮಿಸಿದ್ದರು. ಅಲ್ಪಾವಧಿಯ ವೀಸಾ ಪಡೆದು ಬಂದಿದ್ದ ಮಿಲನ್ ಖಾನ್ ಅವರ ವೀಸಾ ಮಾರ್ಚ್ 22ಕ್ಕೆ ಮುಕ್ತಾಯಗೊಂಡಿತ್ತು.
ಪೆಹಲ್ಗಾಮ್ ದಾಳಿ ಹಿನ್ನೆಲೆಯಲ್ಲಿ ಏಪ್ರಿಲ್ 22ರಂದು ದೇಶ ತೊರೆಯುವಂತೆ ಮಿಲನ್ ಗೆ ನೋಟಿಸ್ ಜಾರಿ ಮಾಡಲಾಗಿತ್ತು. ವಾಘಾ ಗಡಿ ಮೂಲಕ ಪಾಕಿಸ್ಥಾನಕ್ಕೆ ಮರಳುವ ಕೆಲವೇ ಸಮಯಕ್ಕೆ ಮುನ್ನ ಭಾರತದಲ್ಲಿ ತಂಗಲು ನ್ಯಾಯಾಲಯ ಅನುಮತಿ ನೀಡಿತ್ತು.
ಮೂಲಗಳ ಪ್ರಕಾರ ಮುನೀರ್ ಅಹ್ಮದ್ ತನ್ನ ಮದುವೆ ವಿಷಯವನ್ನು ಮುಚ್ಚಿಟ್ಟಿದ್ದೂ ಅಲ್ಲದೇ ಪತ್ನಿಯ ವಿವರ ನೀಡದೇ ಇರುವ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾಗಿದೆ.