ಮೈಸೂರು: ನನಗೆ ಆ ಜಾತಿಗೆಟ್ಟ ಬುದ್ಧಿ ಇಲ್ಲ. ನಾನು ಪಕ್ಷ ನಿಷ್ಠೆ ಇರುವ ವ್ಯಕ್ತಿ ಎಂದು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡಿ ಬೆಟ್ಟದಲ್ಲಿ ಸಿದ್ದರಾಮಯ್ಯ ಪರ ಹೇಳಿಕೆ ಕೊಟ್ಟೆ ಎಂದು ನಾನು ಕಾಂಗ್ರೆಸ್ ಗೆ ಹೋಗುತ್ತಾರೆ ಅಂತಾರೆ. ಆದರೆ ನಾನು ಪಕ್ಷ ನಿಷ್ಠೆ ಇರುವ ವ್ಯಕ್ತಿ. ದೇವೇಗೌಡರ ಮಾತಿಗೆ ಬೆಲೆ ಕೊಟ್ಟು ಇಲ್ಲಿದ್ದೇನೆ ಎಂದರು.
ನಾನು ಸಿದ್ದರಾಮಯ್ಯ ಇಬ್ಬರು 25 ವರ್ಷದಿಂದ ಸ್ನೇಹಿತರು. ನಾನು ಅವರನ್ನು ನೆನಪಿಸಿಕೊಳ್ಳಬೇಕು. ಅವರು ನನ್ನನ್ನು ನೆನಪಿಸಿಕೊಳ್ಳಬೇಕು. ನಾನು ಜೆಡಿಎಸ್ ಪಕ್ಷದಿಂದ ಶಾಸಕ ಆಗಿದ್ದೇನೆ. ಒಂದು ಪಕ್ಷ ಗೆದ್ದು ಇನ್ನೊಂದು ಪಕ್ಷಕ್ಕೆ ಬೆಂಬಲ ನೀಡಲ್ಲ. ಈ ಹಿಂದೆ ರಾಹುಲ್ ಗಾಂಧಿ ಬಿಟ್ಟು ಕೇಂದ್ರ ಹಾಗೂ ರಾಜ್ಯದ ಅತಿರಥ ಮಹಾರಥರು ಕಾಂಗ್ರೆಸ್ ಗೆ ಬನ್ನಿ ಮಿನಿಸ್ಟರ್ ಆಗಿ ಅಂತ ಆಫರ್ ಮಾಡಿದ್ದರು. ನಿಮ್ಮ ಮಗನನ್ನು ಎಂಪಿ ಮಾಡಿ ಅಂದರು. ಆದರೆ ದೇವೇಗೌಡರು ಮನೆಗೆ ಬಂದರು. ನಾನು ಪಕ್ಷದಲ್ಲೇ ಉಳಿದುಕೊಂಡೆ ಎಂದು ಜಿ.ಟಿ ದೇವೇಗೌಡ ತಿಳಿಸಿದರು.
ಸಿಎಂಗೆ ಸರಿ ಸಮವಾದ ಹುದ್ದೆ ಕೊಡುತ್ತೇವೆ
ಚಾಮುಂಡಿ ಬೆಟ್ಟದಲ್ಲಿ ಸಿದ್ದರಾಮಯ್ಯ ಪರ ಹೇಳಿಕೆ ಕೊಟ್ಟೆ ಅಂತ ಕಾಂಗ್ರೆಸ್ ಗೆ ಹೋಗುತ್ತಾರೆ ಅಂತಾರೆ. ನನಗೆ ಆ ಜಾತಿಗೆಟ್ಟ ಬುದ್ಧಿ ಇಲ್ಲ ನಾನು ಪಕ್ಷ ನಿಷ್ಠೆ ಇರುವ ವ್ಯಕ್ತಿ. ದೇವೇಗೌಡರು ಕುಮಾರಸ್ವಾಮಿ ಈ ಹಿಂದೆ ಸಿಎಂಗೆ ಸರಿ ಸಮವಾದ ಹುದ್ದೆ ಕೊಡುತ್ತೇವೆ ಅಂದರು. ಸ್ಥಾನ ಕೊಡಲಿಲ್ಲ ಅಂತ ನನಗೇನೂ ನೋವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ನನ್ನ ಅಂತರಾತ್ಮವನ್ನು ಯಾರು ಅರಿತಿಲ್ಲ. ನನ್ನ ಕುಟುಂಬದವರೇ ನನ್ನ ಅರ್ಥ ಮಾಡಿಕೊಂಡಿಲ್ಲ. ಇನ್ನು ಬೇರೆ ಅವರು ಹೇಗೆ ಅರ್ಥ ಮಾಡಿಕೊಳ್ಳುತ್ತಾರೆ. ನಾನು ಕರ್ಣನ ರೀತಿ. ನನ್ನ ಕೆಲಸ ಚರಿತ್ರೆಯಲ್ಲಿ ಉಳಿಯುತ್ತದೆ ಎಂದು ಅವರು ಹೇಳಿದರು.
ದಿನನಿತ್ಯ ನಾಯಕತ್ವ ಬದಲಾವಣೆ ಕುರಿತು ಚರ್ಚಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ ಇದು ಆಡಳಿತ ಯಂತ್ರದ ಮೇಲೆ ದುಷ್ಪರಿಣಾಮ ಬೀರುತ್ತೆ. ಪ್ರಸ್ತುತ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಅವರ ನಾಯಕತ್ವದಲ್ಲಿ ಸರ್ಕಾರ ನಡೆಯುತ್ತಿದೆ. ಸಚಿವರು ಶಾಸಕರು ಸಿದ್ದರಾಮಯ್ಯ ಸಿಎಂ ಆಗಿರುವ ತನಕ ಅವರನ್ನು ಬೆಂಬಲಿಸಬೇಕು. ಇಲ್ಲದಿದ್ದರೆ ಅಧಿಕಾರಿ ವರ್ಗ ಆಡಳಿತ ಯಂತ್ರ ಕುಸಿಯತ್ತೆ. ಇದು ರಾಜ್ಯದ ಅಭಿವೃದ್ಧಿ ಮೇಲೆ ಪರಿಣಾಮ ಬೀರುತ್ತದೆ ಎಂದರು.
ಡಿಕೆ ಶಿವಕುಮಾರ್ ಸಿಎಂ ಆಗುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಜಿ.ಟಿ ದೇವೇಗೌಡರು, ಅವರ ತಮ್ಮನೇ ಹೇಳಿದ್ದಾರೆ ದೇವರ ದಯೆ ಕಾಲ ಕೂಡಿ ಬಂದ್ರೆ ಸಿಎಂ ಆಗುತ್ತಾರೆ ಅಂತ ಎಂದರು.


