ಪಕ್ಷಕ್ಕಾಗಿ ಹಗಲಿರುಳು ದುಡಿದು ಪಕ್ಷವನ್ನು ಕಟ್ಟಿದ ಯಡಿಯೂರಪ್ಪ ಅವರನ್ನು ತೇಜೋವಧೆ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಗುಡುಗಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ತುರ್ತು ಸುದ್ದಿಗೋಷ್ಠಿ ನಡೆಸಿದ ಅವರು ನನ್ನ ವಿರುದ್ಧ ಬಂಡಾಯ ಘೋಷಿಸಿರುವ ಮುಖಂಡರು ಹೈಕಮಾಂಡ್ ಭೇಟಿ ಮಾಡಿದ್ದಾರೆ. ಪಕ್ಷದ ಭಿನ್ನಮತದ ಬಗ್ಗೆ ನನಗೆ ನೋವಿದೆ. ಆದರೆ ಇನ್ನು ೮ರಿಂದ ೧೦ ದಿನಗಳಲ್ಲಿ ಎಲ್ಲವೂ ಸುಖಾಂತ್ಯವಾಗಲಿದೆ ಎಂದರು.
ಯುಡಿಯೂಪ್ಪ ಅವರು ಪಕ್ಷವನ್ನು ಕಟ್ಟಿದ್ದಾರೆ. ಮೂಲೆಯಲ್ಲಿದ್ದ ವ್ಯಕ್ತಿಯನ್ನು ಕರೆತಂದು ನಾಯಕನನ್ನಾಗಿ ರೂಪಿಸಿದ್ದಾರೆ. ನಾನು ಅವರು ಪಕ್ಷ ಕಟ್ಟಿದ್ದನ್ನು ಹತ್ತಿರದಿಂದ ನೋಡಿದ್ದೇನೆ. ಆದರೆ ಅವರ ವಿರುದ್ಧವೇ ಆರೋಪಗಳನ್ನು ಮಾಡಿ ತೇಜೋವಧೆ ಮಾಡಲಾಗುತ್ತಿದೆ. ಇದು ನನಗೆ ನೋವು ತಂದಿದೆ ಎಂದು ಅವರು ಹೇಳಿದರು.
ನನ್ನನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ನನ್ನ ವಿರುದ್ಧ ಅಸಮಾಧಾನ ಇದೆ ಎಂದು ಗೊತ್ತಿತ್ತು. ಆದರೆ ಇಷ್ಟರಮಟ್ಟಿಗೆ ಎಂದು ಗೊತ್ತಿರಲಿಲ್ಲ. ನಾನು ಯಾವುದೇ ಪಕ್ಷದ ಜೊತೆ ಒಳ ಒಪ್ಪಂದ ಮಾಡಿಕೊಂಡಿಲ್ಲ. ಹಾಗೆ ಮಾಡಿದ್ದರೆ ಮುಡಾ ಹಗರಣದಲ್ಲಿ ಮೈಸೂರಿಂದ ಪಾದಯಾತ್ರೆ ಮಾಡುತ್ತಿರಲಿಲ್ಲ ಎಂದು ಅವರು ಸಮಜಾಯಿಷಿ ನೀಡಿದರು.
ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುವ ಬದಲು ನಮ್ಮ ಪಕ್ಷದ ಮುಖಂಡರ ವಿರುದ್ಧವೇ ಮಾತನಾಡುತ್ತಿದ್ದಾರೆ. ನನ್ನ ಮೇಲಿನ ಆರೋಪಗಳ ಕುರಿತು ಎಲ್ಲಿ ಏನು ಹೇಳಬೇಕೋ ಹೇಳಿದ್ದೇನೆ. ನಿಮ್ಮಷ್ಟು ಅನುಭವ ನನಗೆ ಇಲ್ಲದೇ ಇರಬಹುದು. ಆದರೆ ಪಕ್ಷವನ್ನು ಕಟ್ಟಿದ್ದೇನೆ ಎಂದು ಅವರು ಹೇಳಿದರು.
ಪಕ್ಷ ಸಂಘಟನೆಯಲ್ಲಿ ಕರ್ನಾಟಕ ಇಡೀ ದೇಶದಲ್ಲೇ ೪ನೇ ಸ್ಥಾನದಲ್ಲಿದೆ. ನೋಂದಣಿ ವಿಷಯದಲ್ಲಿ ೩ನೇ ಸ್ಥಾನದಲ್ಲಿದೆ. ಅಲ್ಲದೇ ಕಾರ್ಯಕರ್ತರ ವಿಶ್ವಾಸ ಗಳಿಸಿದ್ದೇನೆ ಎಂದು ವಿಜಯೇಂದ್ರ ಹೇಳಿದರು.