Thursday, December 04, 2025
Menu

ವಾಚ್‌ ಧರಿಸುವುದು ನನ್ನಿಷ್ಟ, ಏಳು ವರ್ಷದ ಹಿಂದೆ ಆಸ್ಟ್ರೇಲಿಯಾದಲ್ಲಿ 24 ಲಕ್ಷ ರೂಪಾಯಿ ಕೊಟ್ಟು ತಗೊಂಡಿದ್ದೆ: ಡಿಕೆ ಶಿವಕುಮಾರ್‌

ಈ ನನ್ನ ವಾಚ್ ಏಳು ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ಖರೀದಿ ಮಾಡಿದೆ. ನಾನು ಇದನ್ನು ನನ್ನ ಕ್ರೆಟಿಡ್ ಕಾರ್ಡ್ ಮೂಲಕ 24 ಲಕ್ಷ ರೂಪಾಯಿ ಕೊಟ್ಟು ಖರೀದಿ ಮಾಡಿದ್ದೇನೆ. ಬೇಕಿದ್ದರೆ ನನ್ನ ಕ್ರೆಡಿಟ್ ಕಾರ್ಡ್ ಪರಿಶೀಲಿಸಿ. ಇದನ್ನು ನನ್ನ ಚುನಾವಣಾ ಅಫಿಡವಿಟ್ ನಲ್ಲೂ ಘೋಷಿಸಿಕೊಂಡಿದ್ದೇನೆ. ಸಿದ್ದರಾಮಯ್ಯ ಅವರ ಬಗ್ಗೆ ಟೀಕೆ ಬಗ್ಗೆ ನನಗೆ ಗೊತ್ತಿಲ್ಲ. ನನಗಾಗಲಿ, ಸಿದ್ದರಾಮಯ್ಯ ಅವರಿಗಾಗಲಿ ನಮಗೆ ಇಷ್ಟವಾದ ವಾಚ್ ಧರಿಸುವ ಹಕ್ಕು ಇದೆ. ಅವರಿಗೆ ಅವರ ಮಗ ವಾಚ್ ಕೊಡಿಸಿರಬಹುದು ಅಥವಾ ಅವರೇ ಅದನ್ನು ಖರೀದಿ ಮಾಡಿರಬಹುದು ಎಂದು ಡಿಸಿಎಂ ಡಿಕೆ. ಶಿವಕುಮಾರ್‌ ಹೇಳಿದ್ದಾರೆ.

ನೀವು ಮತ್ತು ಸಿದ್ದರಾಮಯ್ಯ ಅವರು ದುಬಾರಿ ವಾಚ್ ಧರಿಸಿದ್ದರ ಬಗ್ಗೆ ಬಿಜೆಪಿ ಟೀಕೆ ಮಾಡುತ್ತಿದೆ ಎಂದು ಸದಾಶಿವನಗರ ನಿವಾಸದಲ್ಲಿ  ಮಾಧ್ಯಮದವರು ಕೇಳಿದಾಗ ಹೀಗೆ ಉತ್ತರಿಸಿದ ಡಿಸಿಎಂ, ನಮ್ಮ ತಂದೆಗೆ ವಾಚ್ ಗಳೆಂದರೆ ಬಹಳ ಇಷ್ಟ. ಅವರ ಬಳಿ ಏಳು ವಾಚ್ ಗಳಿದ್ದವು. ಅವರು ಸತ್ತ ನಂತರ ಅದನ್ನು ಯಾರು ಧರಿಸಬೇಕು..? ನಾನು ಧರಿಸಬೇಕು, ಇಲ್ಲವೇ ನನ್ನ ತಮ್ಮ ಧರಿಸಬೇಕು” ಎಂದು ಹೇಳಿದರು.

30 ತಿಂಗಳ ನಂತರ ಬೇಕಾದರೂ ಸಿಎಂ ಬದಲಾಗಬಹುದು ಎಂಬ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ಬಗ್ಗೆ ಕೇಳಿದಾಗ, “ನಾನು ಪಕ್ಷ ಹಾಗೂ ನನಗೆ ಮಾತ್ರ ವಕ್ತಾರ. ಬೇರೆ ನಾಯಕರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ” ಎಂದು  ಪ್ರತಿಕ್ರಿಯಿಸಿದರು.

 ಮತಕಳ್ಳತನ ವಿರುದ್ಧ ಡಿ. 14 ರ ಪ್ರತಿಭಟನೆ ಸಿದ್ಧತೆ ಹಿನ್ನೆಲೆಯಲ್ಲಿ ದೆಹಲಿಗೆ ಪ್ರಯಾಣ

ದೆಹಲಿ ಪ್ರವಾಸಕ್ಕೆ ರಾಜಕೀಯ ಮಹತ್ವವೇನೂ ಇಲ್ಲ, ಡಿ. 8ರ ಸರ್ವಪಕ್ಷ ಸಭೆ ಮುಂದೂಡಿಕೆ ಸಾಧ್ಯತೆ, ವಿರೋಧ ಪಕ್ಷಗಳ ನಾಯಕರಿಗೆ ಅನುವಾಗುವ ದಿನಾಂಕ ನಿಗದಿ ಮಾಡಲಾಗುವುದು. “ಖಾಸಗಿ ಕಾರ್ಯಕ್ರಮ ಹಾಗೂ ಮತಕಳ್ಳತನ ವಿರುದ್ಧದ ಡಿ. 14 ರ ಪ್ರತಿಭಟನೆಗೆ ತಯಾರಿ ಹಿನ್ನೆಲೆಯಲ್ಲಿ ದೆಹಲಿಗೆ ತೆರಳುತ್ತಿದ್ದು, ಇದರ ಹೊರತಾಗಿ ಈ ಪ್ರವಾಸಕ್ಕೆ ರಾಜಕೀಯ ಮಹತ್ವವೇನೂ ಇಲ್ಲ” ಎಂದು  ಶಿವಕುಮಾರ್ ಹೇಳಿದರು.

ದೆಹಲಿ ಪ್ರವಾಸದ ಉದ್ದೇಶವೇನು ಎಂದು ಕೇಳಿದಾಗ, “ನನ್ನ ಆಪ್ತ ಸ್ನೇಹಿತರ ಮಗನ ಮದುವೆ ಇರುವ ಕಾರಣ ತೆರಳುತ್ತಿದ್ದೇನೆ. ಡಿ.14 ರಂದು ಮತ ಕಳ್ಳತನ ವಿರುದ್ಧ ದೆಹಲಿಯ ರಾಮಲೀಲಾ ಮೈದಾನದಲ್ಲಿ ಸಮಾವೇಶವಿದೆ. ಅದಕ್ಕೆ ನಮ್ಮ ರಾಜ್ಯದ ಪ್ರತಿ ಜಿಲ್ಲೆಯಿಂದ 300 ಜನರನ್ನು ಕರೆದುಕೊಂಡು ಹೋಗಬೇಕು. ಈ ಬಗ್ಗೆ ಸಚಿವರಿಗೆ ಹಾಗೂ ಶಾಸಕರಿಗೆ ಸೂಚಿನೆ ನೀಡಿದ್ದೇನೆ. ನಮ್ಮ ಕಾರ್ಯಕರ್ತರಿಗೆ ವಾಸ್ತವ್ಯ ಕಲ್ಪಿಸಲು ಕೆಲವರಿಗೆ ಜವಾಬ್ದಾರಿ ವಹಿಸಬೇಕಾಗಿದೆ. ಈ ದೃಷ್ಟಿಯಿಂದ ನಾನು ದೆಹಲಿಗೆ ಹೋಗುತ್ತಿದ್ದೇನೆ. ನಾಳೆ ಸಚಿವ ಸಂಪುಟ ಸಭೆಗೆ ಮರಳಲಿದ್ದೇನೆ” ಎಂದರು.

ನಮ್ಮ ರಾಜ್ಯದಿಂದಲೇ ಮತಕಳ್ಳತನ ವಿರುದ್ಧ ಹೋರಾಟ ಆರಂಭವಾಗಿದ್ದು, ನಾವು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಹೀಗಾಗಿ ಪ್ರತಿ ತಾಲ್ಲೂಕಿನಿಂದ ಕನಿಷ್ಟ 30 ಜನರನ್ನು, ಬೆಂಗಳೂರಿನಿಂದ ಹೆಚ್ಚು ಜನರನ್ನು ಕರೆದೊಯ್ಯಬೇಕು. ಇದಕ್ಕಾಗಿ ರೈಲ್ವೇ ಸಚಿವರ ಜೊತೆ ಚರ್ಚೆ ಮಾಡಿ ಮನವಿ ಮಾಡಿದ್ದೇನೆ. ಎಲ್ಲಾ ಬ್ಲಾಕ್ ಹಾಗೂ ಜಿಲ್ಲಾ ಕಾಂಗ್ರೆಸ್, ಶಾಸಕರು ಇದರ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ. ಈ ಬಗ್ಗೆ ನಾನು ಹಾಗೂ ಸಿಎಂ ಇಬ್ಬರೂ ಎಲ್ಲರಿಗೂ ಸಂದೇಶ ರವಾನಿಸಿದ್ದೇವೆ” ಎಂದು ಹೇಳಿದರು.

ಡಿ.8 ರ ಸರ್ವಪಕ್ಷ ಸಭೆ ಮುಂದಕ್ಕೆ ಹೋಗುವ ಸಾಧ್ಯತೆ

ಡಿ.8 ರಂದು ದೆಹಲಿಯಲ್ಲಿ ನಡೆಸಲು ಉದ್ದೇಶಿಸಿದ್ದ ಸರ್ವಪಕ್ಷ ಸಭೆಯನ್ನು ಕೆಲವು ತಾಂತ್ರಿಕ ಕಾರಣಗಳಿಂದಾಗಿ ಮುಂದೂಡುವ ಸಾಧ್ಯತೆಗಳಿವೆ. ನಾವು ಈ ಸಭೆಗೆ ವಿರೋಧ ಪಕ್ಷಗಳ ನಾಯಕರನ್ನು ಕರೆದುಕೊಂಡು ಹೋಗಲು ತೀರ್ಮಾನಿಸಿದ್ದೆವು. ಆದರೆ ಅವರು ರಾಗ ಎಳೆಯುತ್ತಿದ್ದಾರೆ. ಹೀಗಾಗಿ ನಾನು ಹಾಗೂ ಸಿಎಂ ಚರ್ಚೆ ಮಾಡಿ, ವಿರೋಧ ಪಕ್ಷದವರಿಗೆ ಅವರಿಗೆ ಸರಿಹೋಗುವ ದಿನಾಂಕ ನಿಗದಿ ಮಾಡುತ್ತೇವೆ” ಎಂದು ಸ್ಪಷ್ಟಪಡಿಸಿದರು.

ಕೆ.ಸಿ ವೇಣುಗೋಪಾಲ್ ಅವರು ಸಿಎಂ ಅವರನ್ನು ಭೇಟಿ ಮಾಡಿದ್ದಾರೆ ಎಂದು ಕೇಳಿದಾಗ, “ಬಹಳ ಸಂತೋಷ. ಸಿಎಂ ಅವರು ವೇಣುಗೋಪಾಲ್, ರಾಹುಲ್ ಗಾಂಧಿ, ಖರ್ಗೆ ಅವರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿದೆ? ಪಕ್ಷದ ವಿಚಾರವಾಗಿ ಅವರು ಮಾತನಾಡುತ್ತಾರೆ” ಎಂದರು.

ಮಂಗಳೂರಿನಲ್ಲಿ ನಿಮ್ಮ ಅಭಿಮಾನಿಗಳು ಡಿಕೆ, ಡಿಕೆ ಎಂದು ಕೂಗಿದ್ದು, ಸಿದ್ದರಾಮಯ್ಯ ಅಭಿಮಾನಿಗಳು ಪೂರ್ಣಾವಧಿ ಸಿಎಂ ಎಂದು ಕೂಗಿದ್ದಾರೆ ಎಂದು ಕೇಳಿದಾಗ, “ ರಾಜಕೀಯದಲ್ಲಿ ಜೈಕಾರ, ಧಿಕ್ಕಾರ, ಅಭಿಮಾನದ ಮಾತುಗಳು ಸಹಜ. ಜನ ಕಳೆದ ಹತ್ತು ವರ್ಷಗಳಿಂದ ಡಿಕೆ, ಡಿಕೆ.. ಎಂದು ಕೂಗುತ್ತಿದ್ದಾರೆ. ಇದರಲ್ಲಿ ಹೊಸತೇನೂ ಇಲ್ಲ. ಬಿಜೆಪಿ ಕಾರ್ಯಕರ್ತರು ಮೋದಿ, ಮೋದಿ.. ಎಂದು ಕೂಗುವುದಿಲ್ಲವೇ? ಕಾಂಗ್ರೆಸ್ ಕಾರ್ಯಕರ್ತರು ರಾಹುಲ್.., ರಾಹುಲ್… ಎಂದು ಕೂಗುತ್ತಾರೆ. ಸಿದ್ದರಾಮಯ್ಯ ಅಭಿಮಾನಿಗಳು ಸಿದ್ದು, ಸಿದ್ದು… ಎಂದು ಕೂಗುತ್ತಾರೆ. ಇದರಲ್ಲಿ ತಪ್ಪೇನಿಲ್ಲ, ಇದಕ್ಕೆಲ್ಲ ಹೆಚ್ಚು ತಲೆಕೆಡಿಸಿಕೊಳ್ಳಬಾರದು. ಇದನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕು. ರಾಜಕಾರಣದಲ್ಲಿ ಜೈಕಾರ, ಧಿಕ್ಕಾರ, ಅಭಿಮಾನದ ಮಾತುಗಳು ಸಹಜ” ಎಂದು ತಿಳಿಸಿದರು.

 

Related Posts

Leave a Reply

Your email address will not be published. Required fields are marked *