ರಾಜ್ಯದಲ್ಲಿ ಮುಖ್ಯಮಂತ್ರಿ ಇದ್ದು ಅವರನ್ನು ಬದಲಾಯಿಸುವ ಅವಶ್ಯಕತೆ ಬರಲ್ಲ. ಈ ಅವಧಿಗೆ ನಾನು ಸಿಎಂ ಆಗುವುದಿಲ್ಲ, 2028 ಕ್ಕೆ ನಾನೇ ಸಿಎಂ ಅಭ್ಯರ್ಥಿಯಾಗಿದ್ದು ಏನಾಗುತ್ತದೆಯೋ ಕಾದು ನೋಡಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ರಾಯಚೂರಿನ ನಿಜಲಿಂಗಪ್ಪ ಕಾಲೋನಿಯಲ್ಲಿರುವ ಸಚಿವ ಎನ್.ಎಸ್.ಬೋಸರಾಜು ಅವರ ನಿವಾ ಸದಲ್ಲಿ ಉಪಹಾರ ಸೇವಿಸಿ ಮಾತನಾಡಿದ ಅವರು, ಡಿಸಿಎಂ ಡಿಕೆಶಿ ಅವರನ್ನು ಬಿಟ್ಟು ರಹಸ್ಯ ಸಭೆಯನ್ನು ಮಾಡಿಲ್ಲ. ಅದು ರಹಸ್ಯ ಸಭೆಯಲ್ಲ, ಊಟದ ಸಭೆಯಾಗಿತ್ತು. ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಬದಲಾವಣೆ, ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಯಂತಹ ಚರ್ಚೆ ನಡೆಸಿಲ್ಲ, ಸಚಿವ ಸಂಪುಟದ ವಿಸ್ತರಣೆಯೂ ಇಲ್ಲ ಎಂದರು.
ರಾಜ್ಯದಲ್ಲಿ ಶೇ.60 ಪರ್ಸೇಂಟ್ ಸರ್ಕಾರವಿದೆ ಎಂದು ಬಿಜೆಪಿಗರು ಸುಳ್ಳು ಆರೋಪ ಮಾಡುವುದನ್ನು ಬಿಟ್ಟು ದಾಖಲೆಗಳೊಂದಿಗೆ ಸಾಬೀತುಪಡಿಸಲಿ. ಸಚಿವ ಪ್ರಿಯಾಂಕ ಖರ್ಗೆ ರಾಜೀನಾಮೆ ನೀಡುವ ಪ್ರಶ್ನೆಯಿಲ್ಲ ಎಂದು ಹೇಳಿದರು. ಬೀದರ್‌ನ ಗುತ್ತಿಗೆದಾರರ ಡೆತ್ ನೋಟ್‌ನಲ್ಲಿ ಖರ್ಗೆ ಅವರ ಆಪ್ತರ ಹೆಸರಿದೆ. ಈಶ್ವರಪ್ಪನವರದ್ದು ನೇರವಾಗಿ ಪತ್ರದಲ್ಲಿ ಹೆಸರಿತ್ತು. ಆಪ್ತರ, ಪಿಎಂಗಳ ಹೆಸರು ಇದೆ ಎಂದ ಮಾತ್ರಕ್ಕೆ ಸಚಿವರು ನೇರವಾಗಿ ಹೊಣೆಗಾರರು ಆಗುವುದಿಲ್ಲ, ಪ್ರಕರಣದ ತನಿಖೆ ನಡೆಯುತ್ತಿದೆ ಎಂದರು.
ಸಾರಿಗೆ ಬಸ್ ದರ ಹೆಚ್ಚಳ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ದರ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿಯವರು ಕೇಂದ್ರದ ಜಿಎಸ್‌ಟಿ ಹೇರಿಕೆ ಬಗ್ಗೆಯೂ ಮಾತನಾಡಬೇಕು, ಕೇಂದ್ರ ಹಣಕಾಸು ಸಚಿವ ಹಳೆಯ ಗಾಡಿಗಳಿಗೆ ಶೇ.18 ರಷ್ಟು ಜಿಎಸ್‌ಟಿ ಹಾಕಿದ್ದಾರೆ. ಸಕ್ಕರೆ, ಕಾರ್ ಸೇರಿ ಇತರೆ ವಸ್ತುಗಳಿಗೆ ಶೇ.12 ರಷ್ಟು ಜಿಎಸ್‌ಟಿ ಹೇರಿದ್ದಾರೆ. ಇದರ ವಿರುದ್ಧ ಬಿಜೆಪಿಗರು ಮಾತನಾಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.