“ನಾನು ಸರ್ಕಾರದಲ್ಲಿದ್ದೇನೆ. ಸಮಾಜದವರ ಅಭಿಪ್ರಾಯಗಳ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ಅದು ಅವರ ಅಭಿಪ್ರಾಯ. ಆನಂತರ ಇದರ ಬಗ್ಗೆ ಮಾತನಾಡುತ್ತೇನೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ದೆಹಲಿಗೆ ತೆರಳುವ ಮುನ್ನ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು. ಒಕ್ಕಲಿಗ ಮಠಾಧೀಶರ ಹಾಗೂ ಮುಖಂಡರ ಸಭೆಯಲ್ಲಿ ಜಾತಿಜನಗಣತಿ ಮುಂದೂಡುವ ನಿರ್ಣಯದ ಬಗ್ಗೆ ಕೇಳಿದಾಗ ಆ ಬಗ್ಗೆ ಈಗ ಪ್ರತಿಕ್ರಿಯಿಸುವುದಿಲ್ಲ ಎಂದರು.
ದೆಹಲಿ ಭೇಟಿಯ ಕುರಿತು ಕೇಳಿದಾಗ, “ಕಾವೇರಿ ನೀರಿನ ವಿಚಾರವಾಗಿ ನ್ಯಾಯಾಲಯದಲ್ಲಿ ವಿಚಾರಣೆ ದಿನಾಂಕ ನಿಗದಿಯಾಗಿದ್ದು, ಈ ಬಗ್ಗೆ ವಕೀಲರುಗಳ ಬಳಿ ಚರ್ಚಿಸಲು ಹಾಗೂ ಒಂದಷ್ಟು ಕೆಲಸಗಳ ಕಾರಣಕ್ಕೆ ತೆರಳುತ್ತಿರುವೆ” ಎಂದು ತಿಳಿಸಿದರು.
ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗವು ಕೈಗೊಳ್ಳಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಸಮೀಕ್ಷೆ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಜಯನಗರದ ಶ್ರೀ ಆದಿ ಚುಂಚನಗಿರಿ ಶಾಖಾ ಮಠದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾಲೋಚನೆ ಸಭೆಯಲ್ಲಿ ಆದಿ ಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶಿರಾದ ಶ್ರೀ ಸ್ಫಟಿಕಪುರಿ ಮಠದ ಶ್ರೀ ನಂಜಾವಾಧೂತ ಸ್ವಾಮೀಜಿ, ಕೆಂಗೇರಿ ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಡಿಸಿಎಂ ಡಿ ಕೆ ಶಿವಕುಮಾರ್, ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಅಶೋಕ್, ಸಚಿವರಾದ ಚಲುವರಾಯಸ್ವಾಮಿ, ಸುಧಾಕರ್, ಮಾಜಿ ಸಿಎಂ ಡಿ ವಿ ಸದಾನಂದಗೌಡ, ಡಿಸಿಎಂ ಅಶ್ವಥ್ ನಾರಾಯಣ್, ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಸಂಸದರು, ಮಾಜಿ ಶಾಸಕರು, ಇನ್ನಿತರ ಮುಖಂಡರು ಭಾಗವಹಿಸಿದ್ದರು
ಸಭೆ ಬಳಿಕ ಮಾತನಾಡಿದ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥಶ್ರೀ, ಯಾವುದೇ ಕಾರಣಕ್ಕೂ ಕ್ರಿಶ್ಚಿಯನ್ ಜೊತೆ ಒಕ್ಕಲಿಗರನ್ನು ಸೇರಿಸಬಾರದು. ಸಮೀಕ್ಷೆಯನ್ನು ಮುಂದೂಡಬೇಕು ಎಂದು ಆಗ್ರಹ ಮಾಡಿದರು. ಜಾತಿಗಣತಿ ಸಮೀಕ್ಷೆ ಪಟ್ಟಿಯಲ್ಲಿ ಧರ್ಮ ಹಿಂದೂ, ಜಾತಿ ಒಕ್ಕಲಿಗ ಬರೆಸಲು ನಿರ್ಣಯ ಕೈಗೊಳ್ಳಲಾಯಿತು. ಉಪ ಜಾತಿಯಲ್ಲೂ ಒಕ್ಕಲಿಗ ಎಂದೇ ನಮೂದಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ. ನಿರ್ಣಯವನ್ನು ನಿರ್ಮಲಾನಂದನಾಥ ಶ್ರೀ ಮಂಡಿಸಿದರೆ, ಡಿಸಿಎಂ ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ, ಸದಾನಂದಗೌಡ ಸೇರಿ ಹಲವು ನಾಯಕರು ಅನುಮೋದನೆ ಕೊಟ್ಟರು. ಸಮೀಕ್ಷೆಯನ್ನು 45 ದಿನ ಮುಂದೂಡಿ ಎಂದೂ ಒತ್ತಾಯಿಸಲಾಯಿತು.
ಒಂದು ವೇಳೆ ಕ್ರಿಶ್ಚಿಯನ್ ಒಕ್ಕಲಿಗ ಎಂದು ಉಲ್ಲೇಖ ಮಾಡಿದರೆ, ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಆರ್.ಅಶೋಕ್, ಸಿ.ಟಿ.ರವಿ, ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ ಎಚ್ಚರಿಕೆ ಕೊಟ್ಟರು. ಜಾತಿ ವಿಚಾರದಲ್ಲಿ ಸಿಎಂಗೆ ಡಿಸಿಎಂ ಒಳ್ಳೆಯ ಪ್ರಶ್ನೆ ಕೇಳಿದ್ದಾರೆ ಎಂದು ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.