ಸಿದ್ದರಾಮಯ್ಯ ಜೆಡಿಎಸ್‌ನಿಂದ ಉಚ್ಛಾಟನೆ ಆಗಿ ಸಿಎಂ ಆದರು. ಯಡಿಯೂರಪ್ಪ ಸಹ ಉಚ್ಚಾಟನೆ ಆದ ಮೇಲೆ ಸಿಎಂ ಆದವರು. ಹೀಗಾಗಿ ನಾನೂ ಸಹ 2028ಕ್ಕೆ ಮುಖ್ಯಮಂತ್ರಿ ಆಗುವುದು ನಿಶ್ಚಿತ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಗದಗ ನಗರದ ಹತ್ತಕಾಳು ಕೂಟದಲ್ಲಿ ನಡೆದ ಕಿತ್ತೂರು ರಾಣಿ ಚನ್ನಮ್ಮ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೈತರಿಗೆ, ಸಮಾಜಕ್ಕೆ ಅನುಕೂಲ ಆಗಬೇಕಾದರೆ ಮೊದಲು ರೈತರಿಗೆ ನೀರು ಕೊಡಬೇಕು. ಅವರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ನಿರುದ್ಯೋಗ ಸಮಸ್ಯೆ ನಿವಾರಣೆ ಆಗಬೇಕು. ರೈತರ ಮಕ್ಕಳಾಗಿದ್ದರೆ ದುಬೈನಲ್ಲಿ ಯಾಕೆ ಆಸ್ತಿ ಮಾಡಿದ್ದಾರೆ. ಕೇವಲ ಒಂದು ದಿನ ಮಲಗಿದರೆ ರೈತರ ಮಕ್ಕಳಾಗಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಈವರೆಗೆ ಮುಖ್ಯಮಂತ್ರಿ ಆದವರು ಲೂಟಿ ಮಾಡುವುದನ್ನು ಬಿಟ್ಟು ಬೇರೆ ಮಾಡಿಲ್ಲ. ಮಾಜಿ ಸಿಎಂಗಳು ವಿಧಾನಸೌಧದ ಮುಂದೆ ಪ್ರಮಾಣ ಮಾಡಲಿ. ಒಮ್ಮೆ ನಮಗೆ ಅವಕಾಶ ಕೊಡಿ, ಕರ್ನಾಟಕದ ಚಿತ್ರಣ ಬದಲಾಗಲಿದೆ. ನಾನು ಪ್ರತಿಜ್ಞೆ ಮಾಡುವೆ. ಜನ ಕೊಟ್ಟ ಅಧಿಕಾರವನ್ನು ಚನ್ಮಮ್ಮ, ಶಿವಾಜಿ ರೀತಿಯ ಆಡಳಿತ ಮಾಡುವೆ ಎಂದರು.
ಪ್ರಾಮಾಣಿಕವಾಗಿ ಮತದಾನ ಮಾಡಿ. ಇಲ್ಲದಿದ್ದರೆ ಹಿಂದೂಗಳು ಉಳಿಯಲು ಸಾಧ್ಯವಿಲ್ಲ. ಜಮೀರ್ ೪೦೦ ಜನರಿಗೆ ಉಚಿತ ತರಬೇತಿ ಕೊಟ್ಟರು. ನಾವೆಲ್ಲಾ ಜಾತಿ ಜಾತಿ ಎಂದು ಬಡಿದಾಡಿ ಮತ ಹಾಕಿದರೆ ಹಿಂದುಗಳು ಜೀವನ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಣವಾಗಲಿದೆ ಎಂದು ಹೇಳಿದರು.
ಅಂಬೇಡ್ಕರ್ ಅವರಿಗೆ ಗೌರವ ಕೊಟ್ಟಿದ್ದು ಮೋದಿ. ಕಾಂಗ್ರೆಸ್ಸಿಗರು ಅಂಬೇಡ್ಕರ್ ಅವರಿಗೆ ದಿಲ್ಲಿಯಲ್ಲಿ ಅಂತ್ಯಸಂಸ್ಕಾರಕ್ಕೆ ಜಾಗ ಕೊಡಲಿಲ್ಲ. ಅವರಿಗೆ ಕಾಂಗ್ರೆಸ್ ಸರಕಾರ ಭಾರತ ರತ್ನ ಕೊಡಲಿಲ್ಲ. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದರು. ಅದಕ್ಕಾಗಿ ನಾವೆಲ್ಲಾ ಒಂದಾಗಬೇಕು. ಸನಾತನ ಹಿಂದೂ ಧರ್ಮ ಇರುವ ವರೆಗೆ ಸಂವಿಧಾನ ಇರುತ್ತೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಗಣಪತಿ ಪ್ರತಿಷ್ಠಾನ ಮಾಡಲಿಕ್ಕಾಗಲ್ಲ, ಆರ್ ಎಸ್ಎಸ್ ನಿಷೇಧ ಮಾಡುವ ಮಾತಾಡುತ್ತಾರೆ. ಅದೇ ಎಸ್‌ಡಿಪಿಐ ಅವರಿಗೆ ಯಾವ ಪರವಾನಗಿ ಇದೆ. ಗಣಪತಿ ಪ್ರತಿಷ್ಠಾಪನೆಗೆ ಡಿಜೆ ಪರವಾನಗಿ ಬೇಕು. ಐದು ಬಾರಿ ಅಜಾನ್ ಕೂಗುವುದಕ್ಕೆ ಯಾರು ಪರವಾನಗಿ ಕೊಟ್ಟಿದ್ದಾರೆ ಎಂದರು.
ಕೂಡಲ ಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಪಂಚಮಸಾಲಿ ಸಮಾಜದ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


