ಹೈದರಾಬಾದ್: ಐಷಾರಾಮಿ ಕಾರುಗಳನ್ನು ಅಕ್ರಮ ಮಾರಾಟದಿಂದ 100 ಕೋಟಿ ರೂ. ವಂಚಿಸಿದ್ದ ಹೈದರಾಬಾದ್ ನ ಡೀಲರ್ ನನ್ನು ಗುಜರಾತ್ ನಲ್ಲಿ ಬಂಧಿಸಲಾಗಿದೆ.
ಕಾರ್ ಲಾಂಗ್ ಶೋರೂಮ್ ಮಾಲೀಕ ಭಸರಾತ್ ಖಾನ್ ಕಾರುಗಳ ಮೂಲ ಬೆಲೆಗಿಂತ ಶೇ.50ರಷ್ಟು ಕಡಿಮೆ ಬೆಲೆಗೆ ಐಷಾರಾಮಿ ಕಾರುಗಳನ್ನು ಆಮದು ಮಾಡಿಕೊಳ್ಳುತ್ತಿದ್ದ. ಈ ಮೂಲಕ ಅಬಕಾರಿ ಸುಂಕ ವಂಚಿಸಿದ್ದ.
ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಕಡಿಮೆ ಬೆಲೆ ನಮೂದಿಸುವ ಮೂಲಕ ಬೆಂಗಳೂರು, ದೆಹಲಿ, ಹೈದರಾಬಾದ್, ಪುಣೆ, ಮುಂಬೈ, ಅಹಮದಾಬಾದ್ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಭಾರೀ ಪ್ರಮಾಣದಲ್ಲಿ ತೆರಿಗೆ ವಂಚನೆ ಮಾಡಿದ್ದ. ಎಂದು ಆದಾಯ ತೆರಿಗೆ ಇಲಾಖೆ ಗುಪ್ತಚರ ವಿಭಾಗ ಹೇಳಿದೆ.
ಅಮೆರಿಕ, ಜಪಾನ್ ಮೂಲದ ಕಾರುಗಳನ್ನು ಶ್ರೀಲಂಕಾ ಮತ್ತು ಸೌದಿ ಅರೆಬಿಯಾ ಮಾರ್ಗವಾಗಿ ಐಷಾರಾಮಿ ಕಾರುಗಳನ್ನು ಭಾರತಕ್ಕೆ ತರುತ್ತಿದ್ದ. ಈ ವೇಳೆ ಎಡಭಾಗದ ಡ್ರೈವಿಂಗ್ ಅನ್ನು ಬಲಭಾಗಕ್ಕೆ ಬದಲಾಯಿಸುತ್ತಿದ್ದ. ಈ ಮೂಲಕ ಭಾರತದ ರಸ್ತೆಗಳಿಗೆ ಕಾರು ಹೊಂದಿಕೊಳ್ಳುವಂತೆ ಮಾಡಿ ಕಡಿಮೆ ಬೆಲೆಯಲ್ಲಿ ಭಸರಾತ್ ಖಾನ್ ಕಾರುಗಳನ್ನು ತರಿಸುತ್ತಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಹಮ್ಮರ್ ಇವಿ, ಕ್ಯಾಡಿಯಾಲಿಕ್ ಎಸ್ಕಲೇಡ್, ರೋಲ್ಸ್ ರಾಯ್ಸ್, ಲೆಕ್ಸಾಸ್, ಟಯೋಟಾ ಲ್ಯಾಂಡ್ ಕ್ರೂಸರ್ ಮತ್ತು ಲಿನ್ ಕ್ಲಾನ್ ನೇವಿಗೇಟರ್ ಸೇರಿದಂಥೆ 30ಕ್ಕೂ ಅಧಿಕ ಐಷಾರಾಮಿ ಕಾರಿಗಳನ್ನು ಭಾರತಕ್ಕೆ ಅಕ್ರಮವಾಗಿ ತಂದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖಾನ್ ಕಳೆದ 10 ವರ್ಷಗಳಿಂದ ಹೈದರಾಬಾದ್ ನಲ್ಲಿ ಕಾರು ಶೋ ರೂಮ್ ನಡೆಸಿಕೊಂಡು ಬರುತ್ತಿದ್ದ. ಇವನೊಬ್ಬನೇ ನೇರವಾಗಿ ಇಂತಹ 8 ಕಾರುಗಳನ್ನು ತರಿಸಿ ಸುಮಾರು 7 ಕೋಟಿ ರೂ. ತೆರಿಗೆ ವಂಚನೆ ಮಾಡಿದ್ದಾನೆ.
ನಂತರ ಅಹ್ಮದ್ ಎಂಬಾತನ ಜೊತೆಗೂಡಿ ಮತ್ತಷ್ಟು ಕಾರುಗಳನ್ನು ಆಮದು ಮಾಡಿಕೊಳ್ಳಲು ಆರಂಭಿಸಿದ್ದಾನೆ. ರಾಜಕಾರಣಿಗಳು ಸೇರಿದಂತೆ ಗಣ್ಯ ವ್ಯಕ್ತಿಗಳಿಗೆ ಈತ ಐಷಾರಾಮಿ ಕಾರು ಕೊಟ್ಟಿದ್ದು, ಇವರು ತೆರಿಗೆ ತಪ್ಪಿಸಿಕೊಳ್ಳಲು ನಗದು ರೂಪದಲ್ಲಿ ಈತನಿಗೆ ಹಣ ಸಂದಾಯ ಮಾಡುತ್ತರಿದ್ದರು.