ಚಾಮರಾಜನಗರ ತಾಲೂಕಿನ ಜನ್ನೂರು ಗ್ರಾಮದಲ್ಲಿ ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆ ಮಾಡಿ ಶವವನ್ನು ಬಿಸಾಡಿ ಪತಿ ನಾಪತ್ತೆ ಎಂದು ನಾಟಕವಾಡಿರುವ ಪ್ರಕರಣವೊಂದು ಬಯಲಾಗಿದೆ.
ಜನ್ನೂರು ಗ್ರಾಮದ ರಮೇಶ್ (45) ಕೊಲೆಯಾದವರು, ಪತ್ನಿ ಗೀತಾ ಹಾಗೂ ಪ್ರಿಯಕರ ಗುರುಪಾದಸ್ವಾಮಿ ಬಂಧಿತ ಆರೋಪಿಗಳು. ದಂಪತಿಗೆ ಎರಡು ಮಕ್ಕಳಿದ್ದು ಕೊಲೆಗೆ ವಿವಾಹೇತರ ಸಂಬಂಧ ಕಾರಣ ಎನ್ನಲಾಗಿದೆ. ರಮೇಶ್ ಗೆ ತಲೆಗೆ ಹೊಡೆದು ದಿಂಬಿನಲ್ಲಿ ಉಸಿರುಗಟ್ಟಿಸಿ ಸಾಯಿಸಿ. ಶವವನ್ನು ಬೆಡ್ ಶೀಟ್ ಮತ್ತು ಪ್ಲಾಸ್ಟಿಕ್ ಟಾರ್ಪಲ್ ಸುತ್ತಿ ಬೈಕ್ ನಲ್ಲಿ ಹೊತ್ತು ಕುಪ್ಪೇಗಾಲ ಸಮೀಪ ಕಬಿನಿ ನಾಲೆಗೆ ಬಿಸಾಡಿದ್ದಾರೆ. ಜ.14 ರಂದು ಆರೋಪಿಗಳು ಈ ಕೃತ್ಯ ಎಸಗಿದ್ದು ಜ.21 ರಂದು ಕುದೇರು ಪೊಲೀಸ್ ಠಾಣೆಗೆ ಪತಿ ಮನೆಯಿಂದ ಹೊರಹೋದವರು ಕಾಣೆಯಾಗಿದ್ದಾರೆಂದು ಗೀತಾ ಪ್ರಕರಣ ದಾಖಲಿಸಿದ್ದಳು.
ಗೀತಾ ಮತ್ತು ಪ್ರಿಯಕರ ಗುರುಪಾದಸ್ವಾಮಿಯನ್ನು ಪೊಲೀಸರು ವಿಚಾರಣೆ ನಡೆಸಿದ ಬಳಿಕ ಕೊಲೆ ಪ್ರಕರಣ ಬಯಲಾಗಿದೆ. ಇಬ್ಬರನ್ನೂ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಫೆ.2ರಂದು ಮೃತ ರಮೇಶನ ಅಕ್ಕ ಸುವರ್ಣ ಠಾಣೆಗೆ ಬಂದು ಅನೈತಿಕ ಸಂಬಂಧದ ಕಾರಣದಿಂದ ತಮ್ಮನನ್ನು ಪತ್ನಿಯೇ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ದೂರು ಕೊಟ್ಟಿದ್ದರಿಂದ ಪೊಲೀಸರು ವಿಚಾರಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.