ದೆವ್ವ ಹಿಡಿದಿದೆ ಎಂದು ಹೇಳಿಕೊಂಡು ಕಲಬುರಗಿಯ ಮಹಿಳೆಗೆ ಆಕೆಯ ಗಂಡನ ಮನೆಯವರು ಮಗನ ಎದುರಲ್ಲೇ ಬೇವಿನ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆದಿದೆ. ಆಳಂದ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.
ಕೊಲೆಯಾದ ಮಹಿಳೆ ಕಲಬುರಗಿ ಆಳಂದ ಪಟ್ಟಣದ ವೆಂಕಟೇಶ್ವರ ನಗರ ನಿವಾಸಿ ಮುಕ್ತಬಾಯಿ. ಆರು ವರ್ಷಗಳ ಹಿಂದೆ ಮುಕ್ತಬಾಯಿಗೆ ಮುರುಮ್ ಗ್ರಾಮದ ಗಿಡ್ಡೆಪ್ಪ ಜೊತೆ ಮದುವೆಯಾಗಿದೆ. ದಂಪತಿಗೆ ಐದು ವರ್ಷದ ಗಂಡು ಮಗನಿದ್ದಾನೆ. ಇತ್ತೀಚೆಗೆ ಮುಕ್ತಾ ಬಾಯಿಗೆ ದೆವ್ವ ಹಿಡಿದಿದೆ ಎಂದು ಆರೋಪಿಸಿ ಗಂಡನ ಮನೆಯವರು ಬೇವಿನ ಕಟ್ಟಿಗೆಯಿಂದ ಹಲ್ಲೆ ನಡೆಸಿದ್ದಾರೆ. ಮಗಳಿಗೆ ಯಾವುದೇ ದೆವ್ವ ಹಿಡಿದಿಲ್ಲ. ಅವಳಿಗೆ ಹಿಂಸೆ ನೀಡಬೇಡಿ ಎಂದು ಮನವಿ ಮಾಡಿದರೂ ಮಾತು ಕೇಳಲಿಲ್ಲ. ಗಂಡ ಮನೆಯಲ್ಲಿ ಇಲ್ಲದ ವೇಳೆ ಐದು ವರ್ಷದ ಮಗನ ಎದುರಲ್ಲೇ ಮುಕ್ತಬಾಯಿಯ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಮೃತ ಮಹಿಳೆಯ ತಾಯಿ ತಿಪ್ಪವ್ವ ಹೇಳಿದ್ದಾರೆ.
ಹಲ್ಲೆಗೊಳಗಾದ ಮಹಿಳೆಯನ್ನು ಗಾಣಗಾಪುರದ ದತ್ತಾತ್ರೇಯ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಪೂಜೆ, ನದಿ ಸ್ನಾನ ಮಾಡಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಲೆಗೆ ಗಂಭೀರ ಪೆಟ್ಟಾಗಿದ್ದರಿಂದ ಚಿಕಿತ್ಸೆ ಫಲಿಸದೇ ಮುಕ್ತಬಾಯಿ ಅಸು ನೀಗಿದ್ದಾರೆ ಎನ್ನಲಾಗಿದೆ.
ಮೃತ ಮಹಿಳೆಯ ಸೋದರಿ ಶ್ರೀದೇವಿ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಮೂಢನಂಬಿಕೆಯ ಹೆಸರಿನಲ್ಲಿ ಮಾಡಿರುವ ಉದ್ದೇಶಪೂರ್ವಕ ಕೊಲೆ ಎಂದು ಆರೋಪಿಸಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಆಳಂದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದು, ತನಿಖೆಯನ್ನು ಮಹಾರಾಷ್ಟ್ರದ ಮುರುಮ್ ಠಾಣೆ ಪೊಲೀಸರಿಗೆ ವರ್ಗಾಯಿಸಲಾಗಿದೆ.


