ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕುಡಿತದ ಚಟಕ್ಕೆ ದಾಸನಾಗಿದ್ದ ವ್ಯಕ್ತಿ ಹಣಕ್ಕಾಗಿ ಪತ್ನಿಯನ್ನು ಪೀಡಿಸಿ ಆಕೆಗೆ ನೇಣು ಬಿಗಿದು ಕೊಲೆ ಮಾಡಲು ಮುಂದಾಗಿದ್ದ, ಅದೃಷ್ಟವಷಾತ್ ಪತ್ನಿ ಪಾರಾಗಿದ್ದಾಳೆ. ಅಪ್ರಾಪ್ತ ವಯಸ್ಕ ಮಗಳನ್ನು ಅಂಗಡಿಗೆ ಕಳಿಸಿ ಪತ್ನಿಯ ಕೊಲೆಗೆ ಮುಂದಾಗಿದ್ದ. ಅಕ್ಕಪಕ್ಕದವರು ಸಮಯಕ್ಕೆ ಸರಿಯಾಗಿ ನೆರವಾಗಿ ಮಹಿಳೆಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಪೊಲೀಸರು ಆರೋಪಿ ರಾಮ್ ನರೇಶ್ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯು ರಾಜರಾಜೇಶ್ವರಿ ನಗರದಲ್ಲಿ ಪತ್ನಿ ಗಾಯತ್ರಿ ಮತ್ತು 17 ವರ್ಷದ ಮಗಳ ಜೊತೆ ವಾಸವಿದ್ದ. ಸೆಕ್ಯೂರಿಟಿ ಗಾರ್ಡ್ ಆಗಿದ್ದ ಆತ ಎರಡು ವರ್ಷದ ಹಿಂದೆ ಕೆಲಸ ಬಿಟ್ಟಿದ್ದ. ಕುಡಿತದ ಚಟಕ್ಕೆ ದಾಸನಾಗಿದ್ದವ ಹಣಕ್ಕಾಗಿ ಹೆಂಡತಿಗೆ ಪೀಡಿಸುತ್ತಿದ್ದ. ಮೊನ್ನೆಯೂ ಹಣಕ್ಕಾಗಿ ಪತ್ನಿಯೊಂದಿಗೆ ಜಗಳ ತೆಗೆದಿದ್ದ, ಆದರೆ ಗಾಯತ್ರಿ ಸುಮ್ಮನಿದ್ದಳು.
ಮಗಳನ್ನ ಅಂಗಡಿಗೆ ಕಳಿಸಿದ ನರೇಶ್ ಮಗಳು ಹೊರ ಹೋಗುತ್ತಿದ್ದಂತಯೇ ಕಬ್ಬಿಣದ ರಾಡ್‌ಗೆ ಸೀರೆ ಹಾಕಿ ಪತ್ನಿಗೆ ನೇಣು ಬಿಗಿದು ಪರಾರಿಯಾಗಿದ್ದ. ಅಷ್ಟರಲ್ಲೇ ಮಗಳು ಅಂಗಡಿಯಿಂದ ಬಂದಿದ್ದು,ಅಕ್ಕಪಕ್ಕದವರನ್ನು ಕೂಗಿದ್ದಳು. ಅವರು ಬಾಗಿಲು ಒಡೆದು ಗಾಯತ್ರಿಯನ್ನು ರಕ್ಷಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯತ್ರಿ ಪತಿ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.