ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ನವ ವಿವಾಹಿತೆ ಗಾನವಿಯ ಪತಿ ಸೂರಜ್ ಸುಸೈಡ್ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಯತ್ನಿಸಿದ ಅತ್ತೆ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾನವಿ ಆತ್ಮಹತ್ಯೆ ಬಳಿಕ ಅವಮಾನದಿಂದ ನೊಂದಿದ್ದ ಸೂರಜ್ ತನ್ನ ತಾಯಿ ಜಯಂತಿ ಮತ್ತು ಸೋದರ ಸಂಜಯ್ ಜೊತೆ ನಾಗಪುರಕ್ಕೆ ತೆರಳಿದ್ದರು. ನಾಗಪುರದಲ್ಲಿಯೇ ಸೂರಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ್ದ ಗಾನವಿಯ ಅತ್ತೆ ಜಯಂತಿ ನಾಗಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಅಕ್ಟೋಬರ್ 29 ರಂದು ಗಾನವಿ – ಸೂರಜ್ ಮದುವೆ ಆಗಿತ್ತು. ಒಂದು ತಿಂಗಳ ಸೂರಜ್ ಮನೆಯವರ ಒತ್ತಾಯಕ್ಕೆ ಮಣಿದು ಅರಮನೆ ಮೈದಾನದಲ್ಲಿ ಭರ್ಜರಿಯಾಗಿ ಮದುವೆ ಆರತಕ್ಷತೆಯನ್ನು ಗಾನವಿ ಕುಟುಂಬದವರು ನಡೆಸಿದ್ದರು. ಗಾನವಿ ಮತ್ತು ಸೂರಜ್ ಶ್ರೀಲಂಕಾಕ್ಕೆ 10 ದಿನ ಹನಿಮೂನ್‌ಗೆಂದು ಹೋಗಿದ್ದವರು ಅರ್ಧದಲ್ಲೇ ವಾಪಸಾಗಿದ್ದರು. ಹಣಕ್ಕಾಗಿ ಗಾನವಿಗೆ ಸೂರಜ್ ಹಾಗೂ ಆತನ ಕುಟುಂಬದವರು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಗಾನವಿ ನೀಡಿದ ದೂರಿನ ಅನ್ವಯ ಸೂರಜ್ ಹಾಗೂ ಕುಟುಂಬದವರ ವಿರುದ್ಧ ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದುವೆಯಾಗಿ ಒಂದೂವರೆ ತಿಂಗಳಿಗೆ ಗಾನವಿ ಆತ್ಮಹತ್ಯೆ ಮಾಡಿಕೊಂಡಿದ್ದು, ಗಾನವಿಯ ಪತಿ ಸೂರಜ್, ಆತನ ಅಣ್ಣ ಸಂಜಯ್ ಹಾಗೂ ತಾಯಿ ಜಯಂತಿಯನ್ನು ತಕ್ಷಣವೇ ಬಂಧಿಸಬೇಕು ಎಂದು ಗಾನವಿ ಪೋಷಕರು ಪ್ರತಿಭಟನೆ ನಡೆಸಿದ್ದರು. ಗಾನವಿಯ ಪತಿ ನಪುಂಸಕ, ಹಣದಾಹಿ ಕುಟುಂಬ ಎಂದು ಗಾನವಿಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಗಾನವಿಯ ದೊಡ್ಡಮ್ಮ ಸಾವಿನ ಬಗ್ಗೆ ಮಾತನಾಡಿದ್ದು, ಒಳ್ಳೆಯ ಸಂಬಂಧ ಎಂದು ಮದುವೆ ಮಾಡಿಸಿ ಅದ್ಧೂರಿಯಾಗಿ ಅರತಕ್ಷತೆ ಮಾಡಿಕೊಟ್ಟೆವು. ವರದಕ್ಷಿಣೆ, ಒಡವೆಗಾಗಿ ಬೇಡಿಕೆ ಇಟ್ಟು ಚಿತ್ರಹಿಂಸೆ ನೀಡಿದ್ದಾರೆ. ಮದುವೆ ಆಗಿ ತಿಂಗಳಾದರೂ ಗಾನವಿಯನ್ನು ಸೂರಜ್ ಮುಟ್ಟಿಲ್ಲ. ಹನಿಮೂನ್‌ಗೆ ಹೋಗಿದ್ದರೂ ಅಷ್ಟೇ ಎಂದು ಆರೋಪಿಸಿದ್ದಾರೆ.
ಆತನಲ್ಲಿದ್ದ ಸಮಸ್ಯೆಯನ್ನ ಮುಚ್ಚಿಡಲು ಗಾನವಿಗೆ ಹಿಂಸೆ ನೀಡಿದ್ದಾನೆ. ಶ್ರೀಲಂಕಾಕ್ಕೆ ಹನಿಮೂನ್‌ಗೆ ಹೋಗಿ ವಾಪಾಸ್ ಬಂದಿದ್ದಾರೆ. ಪ್ರಶ್ನೆ ಮಾಡಿದ್ರೆ ನಿಮ್ಮ ಮಗಳನ್ನ ನಿಮ್ಮ ಮನೆಗೆ ಕರೆದುಕೊಂಡು ಹೋಗಿ ಎಂದಿದ್ದ. ನನ್ನ ಕಳಿಸಬೇಡ ಸೂರಜ್, ನಿನ್ನ ಜೊತೆ ಇರ್ತೀನಿ ನಮ್ಮ ಮನೆಯವರ ಮರ್ಯಾದೆ ಹೋಗುವುದಾಗ ಕೇಳಿಕೊಂಡಿದ್ದಳು ಎಂದು ತಿಳಿಸಿದ್ದಾರೆ.


