Menu

ಯಲ್ಲಾಪುರದಲ್ಲಿ ಶೀಲ ಶಂಕಿಸಿ ಬೆಂಕಿ ಹಚ್ಚಿದ ಗಂಡ: ಏಳು ದಿನ ನರಳಿ ಮೃತಪಟ್ಟ ಪತ್ನಿ

ಪತ್ನಿಯ ಶೀಲ ಶಂಕಿಸಿ ಪತ್ನಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಏಳು ದಿನಗಳ ಬಳಿಕ ಆಕೆ ಮೃತಪಟ್ಟಿರುವ ಘಟನೆ ಉತ್ತರಕನ್ನಡದ ಯಲ್ಲಾಪುರ ತಾಲೂಕಿನ ಕಿರವತ್ತಿ ಬೊಂಬಡಿಕೊಪ್ಪದಲ್ಲಿ ನಡೆದಿದೆ.

ಪತಿ ಬಾಬು ಎಕ್ಕು ಖಾತ್ರೋಟ ಎಂಬಾತ ಪತ್ನಿ ಜನ್ನಿ ಬಾಬು ಖಾತ್ರೋಟ (32) ಅವರಿಗೆ ಬೆಂಕಿ ಹಚ್ಚಿದ್ದ. ಏಳು ದಿನ ನರಳಾಡಿದ ಪತ್ನಿ ಮೃತಪಟ್ಟಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿದ್ದ ಜನ್ನಿ ಮತ್ತು ಬಾಬು ದಂಪತಿ ಕಿರವತ್ತಿ ಬೊಂಬಡಿಕೊಪ್ಪದ ನಿವಾಸಿಗಳು. ಮದುವೆಯಾದ ದಿನದಿಂದಲೂ ಬಾಬುಗೆ ಪತ್ನಿಯ ಶೀಲದ ಬಗ್ಗೆ ಅನುಮಾನವಿತ್ತು. ಈ ಕಾರಣಕ್ಕೆ ಜನ್ನಿಯನ್ನು ಪದೇ ಪದೆ ಮಾನಸಿಕವಾಗಿ ಹಿಂಸಿಸುತ್ತಿದ್ದ. ಅಕ್ಟೋಬರ್ 3ರಂದು ಇಬ್ಬರ ನಡುವೆ ಇದೇ ವಿಚಾರವಾಗಿ ವಾಗ್ವಾದ ನಡೆದಿದೆ.

ನೀನು ಮೊದಲಿನಿಂದಲೂ ಬೇರೆಯವರ ಜೊತೆಗಿರೋ ವಿಷಯ ಗೊತ್ತಿದೆ ಎಂದು ಆರೋಪಿ ಪತ್ನಿಯೊಂದಿಗೆ ಕೂಗಾಡಿದ್ದ. ನನ್ನನ್ನು ಏಕೆ ಬೈಯುವೆ ಎಂದು ಪತ್ನಿ ಮರುಪ್ರಶ್ನೆ ಮಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಆರೋಪಿ ಬಾಬು, ಬೈಕ್‌ಗೆ ಹಾಕಲು ತಂದಿದ್ದ ಪೆಟ್ರೋಲ್ ಜನ್ನಿಯ ಮೈಮೇಲೆ ಸುರಿದು ಬೆಂಕಿ ಹಚ್ಚಿದ್ದ. ಬೆಂಕಿಯ ಜ್ವಾಲೆಯಲ್ಲಿ ಸಿಕ್ಕಿಹಾಕಿಕೊಂಡ ಜನ್ನಿ ತವರು ಮನೆಯ ಕಡೆಗೆ ಓಡಿದ್ದಾರೆ. ತವರು ಮನೆಯವರು ತಕ್ಷಣ ಬೆಂಕಿ ಆರಿಸಿ ಜನ್ನಿಯನ್ನು ರಕ್ಷಿಸಲು ಯತ್ನಿಸಿದ್ದಾರೆ. ಜನ್ನಿಯ ಸಹೋದರ ಗಂಗಾರಾಮ ಬಾಬು ಎಡಗೆ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ಪೊಲೀಸರು ಜನ್ನಿಯನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗಲೇ ಜನ್ನಿ ತನಗಾದ ಅನ್ಯಾಯದ ಬಗ್ಗೆ ಪೊಲೀಸರಿಗೆ ಹೇಳಿಕೆ ನೀಡಿದ್ದರು. ಎರಡು ದಿನಗಳ ಚಿಕಿತ್ಸೆಯ ನಂತರ ತವರು ಮನೆಗೆ ಮರಳಿದ್ದರು. ಐದು ದಿನ ತವರು ಮನೆಯಲ್ಲಿಯೇ ಆರೈಕೆಯಲ್ಲಿದ್ದ ಜನ್ನಿ ಗಾಯದಿಂದಾಗಿ ನರಳುತ್ತಿದ್ದರು. ಅಕ್ಟೋಬರ್ 10ರಂದು ಮೃತಪಟ್ಟಿದ್ದಾರೆ. ಜನ್ನಿಯ ಸಾವಿಗೆ ಕಾರಣನಾದ ಆರೋಪಿ ಬಾಬುವನ್ನು ಪೊಲೀಸರು ಆರೋಪಿಯನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Related Posts

Leave a Reply

Your email address will not be published. Required fields are marked *