ಅನಸ್ತೇಷಿಯಾ ಕೊಟ್ಟು ಸಾಯಿಸಿದರೆ ಸಾವಿನ ನಿಖರ ಕಾರಣ ಪೊಲೀಸರ ತನಿಖೆಯಲ್ಲಿ ಗೊತ್ತಾಗುವುದಿಲ್ಲ ಎಂದು ಭಾವಿಸಿದ್ದೆ. ಪೊಲೀಸರು ಇಷ್ಟು ಟೆಕ್ನಿಕಲ್ ಆಗಿ ಮತ್ತು ಆಳವಾಗಿ ತನಿಖೆ ನಡೆಸುತ್ತಾರೆ ಎಂದು ಗೊತ್ತಿರಲಿಲ್ಲ. ಹೀಗೆ ತನಿಖೆಯಾಗುತ್ತದೆ ಎಂದು ತಿಳಿದಿದ್ದರೆ ಕೊಲೆಯೇ ಮಾಡುತ್ತಿರಲಿಲ್ಲ ಎಂದು ವೈದ್ಯೆ ಕೃತಿಕಾ ರೆಡ್ಡಿಯ ಹತ್ಯೆ ಮಾಡಿರುವ ಪತಿ ಡಾ. ಮಹೇಂದ್ರ ರೆಡ್ಡಿ ಹೇಳಿದ್ದಾನೆ.
ಬೆಂಗಳೂರಿನ ಮಾರತಹಳ್ಳಿರ ವೈದ್ಯೆ ಕೃತಿಕಾ ಎಂ. ರೆಡ್ಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಡಾ. ಮಹೇಂದ್ರ ರೆಡ್ಡಿ ಪೊಲೀಸರ ಮುಂದೆ ಆಘಾತಕಾರಿ ಸತ್ಯಗಳನ್ನು ಬಹಿರಂಗಪಡಿಸಿದ್ದಾನೆ, ಆಸ್ತಿ ಮೇಲಿದ್ದ ಕಣ್ಣು, ಅನೈತಿಕ ಸಂಬಂಧ ಮತ್ತು ಕೃತಿಕಾಳ ಆರೋಗ್ಯ ಸಮಸ್ಯೆಗಳೇ ಕೊಲೆಗೆ ಪ್ರೇರಣೆಯಾಗಿವೆ ಎಂದು ಆತ ತನಿಖೆಯಲ್ಲಿ ಒಪ್ಪಿಕೊಂಡಿದ್ದಾನೆ.
ತಾನು ಪತ್ನಿಯ ಕೊಲೆಯನ್ನು ಪೂರ್ವನಿಯೋಜಿತವಾಗಿ ಮಾಡಿದ್ದಾಗಿಯೂ ಒಪ್ಪಿಕೊಂಡಿದ್ದಾನೆ. ಆಸ್ತಿ ವಿವಾದವೇ ಕೊಲೆಗೆ ಮುಖ್ಯ ಕಾರಣ, ಆಕೆಗೆ ಡಿವೋರ್ಸ್ ನೀಡಿದರೆ ಆಸ್ತಿಯಲ್ಲಿ ನನಗೆ ಪಾಲು ಸಿಗುತ್ತಿರಲಿಲ್ಲ. ಹಾಗಾಗಿ ಡಿವೋರ್ಸ್ ನೀಡಲಿಲ್ಲ. ನೀಡಿದರೆ ಸಮಾಜದಲ್ಲಿ ಮರ್ಯಾದೆ ಕೂಡ ಹೋಗುತ್ತದೆ ಎಂಬ ಭಯವೂ ಇತ್ತು ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ.
ಕೃತಿಕಾಳ ಅನಾರೋಗ್ಯದ ಕಾರಣ ಹಿಂಸೆ ಅನುಭವಿಸುತ್ತಿದ್ದೆ. ಡಾ. ಕೃತಿಕಾ ಎಂ. ರೆಡ್ಡಿ ಅವರ ಆರೋಗ್ಯ ಸರಿ ಇರಲಿಲ್ಲ. ಆಸ್ಪತ್ರೆಯಲ್ಲಿ ರೋಗಿಗಳನ್ನು ನೋಡಿಕೊಂಡು ಬಂದ ಮೇಲೆ ಸಂಜೆ ಮನೆಯಲ್ಲಿ ಆಕೆಯನ್ನೂ ನೋಡಿಕೊಳ್ಳುವುದು ನನಗೆ ಹಿಂಸೆಯಾಗುತ್ತಿತ್ತು. ಕೃತಿಕಾಗೆ ಗ್ಯಾಸ್ಟ್ರಿಕ್ ಸಮಸ್ಯೆಯಿದ್ದ ವಿಷಯವನ್ನು ಆಕೆಯ ಕುಟುಂಬದವರು ಮದುವೆ ಸಮಯದಲ್ಲಿ ಮುಚ್ಚಿಟ್ಟಿದ್ದರು ಎಂದು ಮಹೇಂದ್ರ ಆರೋಪಿಸಿದ್ದಾನೆ.
ಆರೋಪಿಯು ಅನೈತಿಕ ಸಂಬಂಧ ಹೊಂದಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಅನೈತಿಕ ಸಂಬಂಧಕ್ಕೋಸ್ಕರ ಕೊಲೆ ಮಾಡುವ ಉದ್ದೇಶ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ. ತನಗೆ ಪ್ರತಿ ತಿಂಗಳು 70 ರಿಂದ 80 ಸಾವಿರ ರೂ. ಫೆಲೋಶಿಪ್ ರೂಪದಲ್ಲಿ ಆದಾಯ ಬರುತ್ತಿತ್ತು ಎಂದೂ ಮಾಹಿತಿ ನೀಡಿದ್ದಾನೆ.