ಕಲಬುರಗಿಯ ಅಫಜಲಪುರ ತಾಲೂಕಿನ ಬಳೂರಗಿ ಗ್ರಾಮದ ಬಳಿ ಹಾಡಹಗಲೇ ಕತ್ತು ಕೊಯ್ದು ಪತ್ನಿಯನ್ನು ಪತಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮಹಾರಾಷ್ಟ್ರದ ಶೈಲಾ (28) ಕೊಲೆಯಾದ ಮಹಿಳೆ.
ಆರೋಪಿ ಪತಿ ಅಕ್ಷಯ್ ಎರ್ಟಿಗಾ ಕಾರಿನಲ್ಲಿ ಪತ್ನಿಯನ್ನು ಕರೆದುಕೊಂಡು ಬಂದು ಬಳೂರಗಿ ಗ್ರಾಮದ ಬಳಿ ನಿಲ್ಲಿಸಿದ್ದಾನೆ. ಪತ್ನಿಯನ್ನು ಕಾರಿನಿಂದ ಬಲವಂತವಾಗಿ ಕೆಳಗಿಳಿಸಿ ನಡುರಸ್ತೆಯಲ್ಲೇ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ. ಬಳಿಕ ಶವದ ಮೇಲೆ ಕಾರು ಹಾಯಿಸಿ ವಿಕೃತಿ ತೋರಿದ್ದಾನೆ.
ಕೊಲೆಯ ದೃಶ್ಯ ಸ್ಥಳೀಯರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಈ ಸಂಬಂಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಶಾಲೆಗೆ ಹೋಗು ಎಂದಿದ್ದಕ್ಕೆ ಮಹಿಳೆ ಮೇಲೆ ವಿದ್ಯಾರ್ಥಿ ಹಲ್ಲೆ
ಶಾಲೆಗೆ ಹೋಗದೆ ಗೆಳೆಯರ ಜೊತೆ ಓಡಾಡಿಕೊಂಡಿದ್ದಕ್ಕಾಗಿ ಮಹಿಳೆ ಗದರಿದರೆಂದು 11ನೇ ತರಗತಿ ವಿದ್ಯಾರ್ಥಿ ಆಕೆ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ವಿದ್ಯಾರ್ಥಿಯನ್ನು ಅರಕ್ಕೋಣಂ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ರಾಣಿಪೇಟೆ ಜಿಲ್ಲೆಯ ಅರಕ್ಕೋಣಂನ ಓಥವಡೈ ಬೀದಿಯಲ್ಲಿ ವಾಸಿಸುವ ಸರವಣನ್ ಮತ್ತು ಸತ್ಯ ದಂಪತಿಗೂ ಆ ಬಾಲಕನ ಕುಟುಂಬಕ್ಕೂ ಪರಿಚಯವಿತ್ತು. ಸರವಣನ್ ವಿಮಾ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಸ್ನೇಹಿತ ಲಕ್ಷ್ಮಿಪತಿ ಕೂಡ ಅದೇ ವೃತ್ತಿಯಲ್ಲಿದ್ದರು.
ಲಕ್ಷ್ಮಿಪತಿಯ 16 ವರ್ಷದ ಮಗ ಸತ್ಯ ಅವರ ಮನೆಗೆ ಆಗಾಗ ಭೇಟಿ ನೀಡುತ್ತಿದ್ದ. ಮೂರ್ನಾಲ್ಕು ದಿನಗಳಿಂದ ಶಾಲೆಗೆ ಹೋಗಿಲ್ಲ ಎಂಬ ವಿಷಯ ಸತ್ಯ ಅವರಿಗೆ ಗೊತ್ತಾಗಿತ್ತು. ಆತನನ್ನು ಕರೆದು ಅಪ್ಪ-ಅಮ್ಮ ಹೇಳಿದ್ದನ್ನು ಕೇಳಬೇಕು, ದಿನವೂ ಶಾಲೆಗೆ ಹೋಗಬೇಕೆಂದು ಸಲಹೆ ನೀಡಿದ್ದರು. ಈ ವೇಳೆ ಕೋಪದಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ.
ಘಟನೆಯ ಬಗ್ಗೆ ಅರಕ್ಕೋಣಂ ಪೊಲೀಸರಿಗೆ ತಕ್ಷಣ ಮಾಹಿತಿ ನೀಡಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯನ್ನು ಪೊಲೀಸ್ ರಕ್ಷಿಸಿ ತಿರುವಳ್ಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು.


