Menu

ಗಂಡು ಮಗುವಿಗೆ ಹಂಬಲ: ವಿಜಯಪುರದಲ್ಲಿ ಮಾಟಗಾತಿ ಸಲಹೆಯಂತೆ ರಕ್ತ ಬರುವಂತೆ ಪತ್ನಿಯ ಕೂದಲು ಕಿತ್ತ ಗಂಡ

ವಿಜಯಪುರ ಜಿಲ್ಲೆಯ ಹೊನ್ನುಟಗಿ ಗ್ರಾಮದಲ್ಲಿ ಗಂಡು ಮಗು ಬೇಕೆಂದು ಬಯಸುತ್ತಿದ್ದ ವ್ಯಕ್ತಿ ಮಾಟಗಾತಿಯ ಮಾತು ಕೇಳಿ ಪತ್ನಿಯ ನೆತ್ತಿಯಲ್ಲಿ ರಕ್ತ ಬರುವಂತೆ ಬಲವಂತವಾಗಿ ಕೂದಲನ್ನು ಕತ್ತರಿಸಿರುವ ಘಟನೆ ನಡೆದಿದೆ.

ದುಂಡೇಶ್‌ ಮತ್ತು ಜ್ಯೋತಿ ದಳವಾಯಿ ದಂಪತಿಗೆ ಮೂರು ಹೆಣ್ಣು ಮಕ್ಕಳಿದ್ದು, ನಾಲ್ಕನೇಯದಾಗಿ ಗಂಡು ಮಗುವಿಗೆ ಜನ್ಮ ನೀಡಲಿ ಎಂಬ ಕಾರಣಕ್ಕೆ ಪತಿ ಮತ್ತು ಅತ್ತೆ ಸೇರಿ ಈ ಕೃತ್ಯ ಮಾಡಿರುವುದಾಗಿ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಂಟು ವರ್ಷದ ಹಿಂದೆ ಜ್ಯೋತಿ ಮತ್ತು ಡುಂಡೇಶ್ ಮದುವೆಯಾಗಿದೆ. ಗಂಡು ಮಗು ಬೇಕೆಂದು ದುಂಡೇಶ್ ಮತ್ತು ಆತನ ತಂದೆ ತಾಯಿ ಜ್ಯೋತಿಗೆ ಹಿಂಸೆ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಅವರೆಲ್ಲ ಗಂಡು ಮಗುವಿಗಾಗಿ ಕೊಲ್ಹಾರ ತಾಲೂಕಿನ ಮುಳಗಾಡ ಮೂಲದ ಮಂಗಳಾ ಎಂಬ ಮಾಟಗಾತಿಯ ನೆರವು ಕೋರಿದ್ದರು.

ಮಾಟಗಾತಿ ಮಂಗಳಾ, ನಿನ್ನ ಪತ್ನಿಯ ಮೈಯಲ್ಲಿ ದೆವ್ವವಿದೆ. ಹೀಗಾಗಿ ಗಂಡು ಮಗು ಆಗುತ್ತಿಲ್ಲ. ದೆವ್ವ ಬಿಡಿಸಬೇಕಾದರೆ ಆಕೆಯ ನೆತ್ತಿಯ ಭಾಗದಲ್ಲಿ ರಕ್ತ ಕಾಣುವಂತೆ ಕೂದಲು ಕತ್ತರಿಸಬೇಕೆಂದು ದುಂಡೇಶ್​ಗೆ ಹೇಳಿದ್ದಳು. ಇದನ್ನು ಕೇಳಿದ ಆತ ಪತ್ನಿಯ ಮೇಲೆ ಹಲ್ಲೆ ಮಾಡಿ ತಲೆಯ ಮಧ್ಯಭಾಗದ ಕೂದಲನ್ನು ಬಲವಂತವಾಗಿ ಬ್ಲೇಡ್‌ನಿಂದ ಕಟ್ ಮಾಡಿದ್ದ. ಮಾಟಗಾತಿ ಹೇಳಿದಂತೆ ಪತ್ನಿಯ ಕೂದಲನ್ನು ತೆಗೆದುಕೊಂಡು ಹೋಗಿ ಸ್ಮಶಾನದಲ್ಲಿ ಸುಟ್ಟುಹಾಕಿದ್ದ.

ತಲೆಯಲ್ಲಿ ಗಾಯವಾಗಿ ರಕ್ತಸ್ರಾವದಿಂದ ಅಸ್ವಸ್ಥಗೊಂಡ ಜ್ಯೋತಿ, ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ತವರು ಮನೆಗೆ ಹೋಗಿದ್ದರು. ತಡವಾಗಿ ಜ್ಯೋತಿ ಹಾಗೂ ಕುಟುಂಬಕಸ್ಥರು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Related Posts

Leave a Reply

Your email address will not be published. Required fields are marked *