ಅಹಮದಾಬಾದ್‌ನಲ್ಲಿ ಮಹಿಳೆಯೊಬ್ಬರು ಬೀದಿ ನಾಯಿಗಳ ಮೇಲೆ ಅತಿಯಾದ ಪ್ರೀತಿ ತೋರಿಸುತ್ತಾ, ಅವುಗಳನ್ನು ಮನೆಯೊಳಗೆ ಕರೆತಂದು ಬೆಡ್‌ರೂಂ ಹಾಸಿಗೆಯಲ್ಲಿ ಮಲಗಿಸುತ್ತಿರುವುದಕ್ಕೆ ರೋಸಿ ಹೋದ ಪತಿ ವಿಚ್ಛೇದನ ಕೋರಿ ಗುಜರಾತ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್ ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ ಒಂದರಂದು ನಡೆಸಲಿದೆ.
ಅಹಮದಾಬಾದ್‌ನ ದಂಪತಿ 2006ರಲ್ಲಿ ವಿವಾಹವಾಗಿದ್ದು, ಪತ್ನಿಯು ಬೀದಿ ನಾಯಿಗಳ ಮೇಲೆ ತೋರುವ ಅತಿಯಾದ ಪ್ರೀತಿ ಮತ್ತು ಅತಿರೇಕದ ವರ್ತನೆಯೇ ದಾಂಪತ್ಯ ಜೀವನದ ವೈಮನಸ್ಯಕ್ಕೆ ಕಾರಣವಾಗಿದೆ ಎಂದು ಪತಿ ದೂರಿದ್ದಾರೆ.
ಪತ್ನಿ ನಿರಂತರವಾಗಿ ಬೀದಿ ನಾಯಿಗಳನ್ನು ಮನೆಗೆ ಕರೆತಂದು ಅವುಗಳನ್ನು ಮನೆ ಒಳಗೆ ಬಿಡುತ್ತಿದ್ದಳು. ನಾಯಿಗಳನ್ನು ನಮ್ಮ ಹಾಸಿಗೆಯಲ್ಲಿಯೇ ಮಲಗಲು ಬಿಡುತ್ತಿದ್ದಳು. ವಿರೋಧಿಸಿದರೆ ಜಗಳವಾಡುತ್ತಿದ್ದಳು. ನಾಯಿಗಳು ಮನೆ ಗಲೀಜು ಮಾಡುತ್ತಿದ್ದವು, ಅಕ್ಕಪಕ್ಕ ಮನೆಯವರು ದೂರು ನೀಡುತ್ತಿದ್ದರು. ನಾಯಿಗಳು ನನಗೆ ಕಚ್ಚಿರುವುದೂ ಇದೆ ಎಂದು ಪತಿಯು ಅರ್ಜಿಯಲ್ಲಿ ವಿವರಿಸಿದ್ದಾರೆ.
ಅಪಾರ್ಟ್‌ಮೆಂಟ್ ವಸತಿ ಸಂಘ ನಾಯಿಗಳನ್ನು ಮನೆಗೆ ತರಬಾರದೆಂದು ಸ್ಪಷ್ಟ ಸೂಚನೆ ನೀಡಿತ್ತು. ಆದರೂ ಪತ್ನಿ ಮನೆಗೆ ತಂದಿದ್ದರಿಂದ ನಮ್ಮ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು. ನಾಯಿಗಳನ್ನು ಸಾಕಲು ಆಗುವ ಖರ್ಚು, ವಾಸನೆ ಮತ್ತು ರಾತ್ರಿಯ ನಿದ್ರೆಯ ಕೊರತೆ ಇವೆಲ್ಲವು ನನ್ನ ಮಾನಸಿಕ ನೆಮ್ಮದಿ ಹಾಳು ಮಾಡಿತ್ತು. ಈಗಾಗಲೇ ಮಧುಮೇಹದಿಂದ ಬಳಲುತ್ತಿದ್ದೇನೆ. ಅವಳ ವರ್ತನೆಯಿಂದ ಆರೋಗ್ಯ ಸಮಸ್ಯೆಗಳು ಮತ್ತಷ್ಟು ಬಿಗಡಾಯಿಸುತ್ತಿವೆ ಎಂದು ಪತಿ ಕೋರ್ಟ್‌ನಲ್ಲಿ ಹೇಳಿದ್ದಾರೆ.
ಪತ್ನಿ ನನ್ನ ಮೇಲೆ ವಿವಾಹೇತರ ಸಂಬಂಧದ ಸುಳ್ಳು ಆರೋಪ ಮಾಡಿದ್ದು, ಮಾನಸಿಕ ಒತ್ತಡದಿಂದ ಕಚೇರಿಯಲ್ಲೂ ಕೆಲಸದ ಮೇಲೆ ಗಮನ ಗಮನ ಹರಿಸಲು ಸಾಧ್ಯವಾಗಲಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಪತ್ನಿ ಎಲ್ಲ ಆರೋಪಗಳನ್ನು ತಳ್ಳಿಹಾಕಿದ್ದಾರೆ. ನಾನು ಬೀದಿ ನಾಯಿಗಳನ್ನು ಮನೆಗೆ ಕರೆತಂದಿಲ್ಲ. ನನ್ನ ಪತಿ ಪ್ರಾಣಿಹಿತ ಟ್ರಸ್ಟ್‌ನಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ಪ್ರಾಣಿಗಳ ಮೇಲೆ ಪ್ರೀತಿ ಇದೆ. ನಾಯಿ ಸಾಕುವುದರಿಂದ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಬಂದಿಲ್ಲ. ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಪತ್ನಿ ಪ್ರತಿಕ್ರಿಯಿಸಿದ್ದಾರೆ.
2012ರಲ್ಲಿ ಪತಿಯು ಬೆಂಗಳೂರಿನಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದು, ಅದು ವಜಾ ಆಗಿತ್ತು. ಬಳಿಕ 2016ರಲ್ಲಿ ಮತ್ತೊಮ್ಮೆ ಅರ್ಜಿ ಸಲ್ಲಿಸಿದರೂ ನ್ಯಾಯಾಲಯ ಮಧ್ಯಸ್ಥಿಕೆಗಾಗಿ ಸಲಹೆ ನೀಡಿತ್ತು. ಫೆಬ್ರವರಿ 2024ರಲ್ಲಿ ಅಹಮದಾಬಾದ್‌ನ ಕೌಟುಂಬಿಕ ನ್ಯಾಯಾಲಯ ಪತಿಯ ಅರ್ಜಿಯನ್ನು ತಿರಸ್ಕರಿಸಿತ್ತು. ಈ ಬಾರಿ ಪತಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.


